ಮುಂಬೈ: ಏನೂ ಸಾಧಿಸದವರೆಲ್ಲಾ ಕೊಹ್ಲಿ, ರೋಹಿತ್ ರಂತಹ ದಿಗ್ಗಜರ ಭವಿಷ್ಯ ನಿರ್ಧರಿಸುವಂತಾಗಿದೆ ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ವ್ಯಂಗ್ಯ ಮಾಡಿದ್ದಾರೆ.
ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಒತ್ತಡದಿಂದ ಟೆಸ್ಟ್ ಗೆ ನಿವೃತ್ತಿ ಹೇಳಿದ್ದಾಗಿದೆ. ಇದೀಗ 2027 ರ ಏಕದಿನ ವಿಶ್ವಕಪ್ ವರೆಗೆ ತಂಡದಲ್ಲಿ ಇರಬೇಕಾದರೆ ಇಬ್ಬರೂ ರನ್ ಗಳಿಸಬೇಕು ಎಂದು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಹೇಳಿದ್ದರು.
ಇದೀಗ ಹರ್ಭಜನ್ ಇದೇ ವಿಚಾರಕ್ಕೆ ಟಾಂಗ್ ಕೊಟ್ಟಿದ್ದಾರೆ. ನನಗೆ ಇದೊಂದು ವಿಚಾರ ಅರ್ಥವಾಗುತ್ತಿಲ್ಲ. ಇದು ನನಗೂ ಆಗಿದೆ, ನನ್ನ ಹಾಗೇ ನನ್ನ ಕೆಲವು ಸಹ ಆಟಗಾರರಿಗೂ ಆಗಿದೆ. ವಿರಾಟ್ ಕೊಹ್ಲಿಯಂತಹ ಆಟಗಾರರನ್ನು ನೋಡುವಾಗ ಖುಷಿಯಾಗುತ್ತದೆ. ಅವರು ಈಗಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಜೀವನದಲ್ಲಿ ತಾವು ಏನೂ ಸಾಧನೆ ಮಾಡದೇ ಇರುವವರೆಲ್ಲಾ ಕೊಹ್ಲಿ, ರೋಹಿತ್ ರಂತಹ ಆಟಗಾರರ ಭವಿಷ್ಯ ನಿರ್ಧರಿಸುತ್ತಾರೆ. ಇದು ದುರದೃಷ್ಟ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ರೋಹಿತ್, ಕೊಹ್ಲಿ ಭಾರತದ ದಿಗ್ಗಜ ಆಟಗಾರರು. ಅವರು ಎಷ್ಟು ಸಮಯ ಆಡುತ್ತಾರೋ ಅಷ್ಟು ಸಮಯ ಆಡಲು ಅವಕಾಶ ನೀಡಬೇಕು ಎಂದು ಭಜಿ ಅಭಿಪ್ರಾಯಪಟ್ಟಿದ್ದಾರೆ.