ರಾಯ್ಪುರ: ಕಣ್ಣು ರೆಪ್ಪೆ ಬಿದ್ದಿದ್ದರೆ ಕೈ ಮೆಲೆ ಹಾಕಿಕೊಂಡು ಮನಸ್ಸಿನಲ್ಲೇ ವಿಶ್ ಕೇಳಿಕೊಳ್ಳುವ ಮಕ್ಕಳಾಟ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಇದನ್ನೇ ಈಗ ರೋಹಿತ್ ಶರ್ಮಾ ಮಾಡಿದ್ದಾರೆ. ಈ ಫನ್ನಿ ವಿಡಿಯೋ ಈಗ ವೈರಲ್ ಆಗಿದೆ.
ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ 358 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 362 ರನ್ ಗಳಿಸಿ 4 ವಿಕೆಟ್ ಗಳ ಗೆಲುವು ಸಾಧಿಸಿತ್ತು. ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಡಗ್ ಔಟ್ ಬಳಿ ಮಾತನಾಡುತ್ತಾ ನಿಂತಿದ್ದರು.
ಈ ವೇಳೆ ರೋಹಿತ್ ಕಣ್ಣು ಕೆಳಗೆ ಬಿದ್ದಿದ್ದ ರೆಪ್ಪೆಯ ಕೂದಲು ಕಾಣಿಸಿತು. ಸಾಮಾನ್ಯವಾಗಿ ಈ ರೀತಿ ಬಿದ್ದಿದ್ದರೆ ಅದನ್ನು ಕೈ ಮೇಲೆ ಇಟ್ಟುಕೊಂಡು ಮನಸ್ಸಿನಲ್ಲಿ ನಮ್ಮ ಆಸೆ ಹೇಳಿ ಉಫ್ ಮಾಡಿದರೆ ನಮ್ಮ ಆಸೆ ನೆರವೇರುತ್ತದೆ ಎಂಬ ನಂಬಿಕೆಯಿದೆ. ಚಿಕ್ಕಮಕ್ಕಳು ಈ ರೀತಿ ಆಟವಾಡುತ್ತಾರೆ.
ಅದೇ ರೀತಿ ರೋಹಿತ್ ಕೆನ್ನೆ ಮೇಲೆ ಬಿದ್ದಿದ್ದ ರೆಪ್ಪೆಯನ್ನು ನೀಡಿದ ರಿಷಭ್ ಪಂತ್ ಕೈ ಮೇಲಿಟ್ಟು ನಿಮಗೆ ಬೇಕಾಗಿದ್ದನ್ನು ಕೇಳುವಂತೆ ಹೇಳುತ್ತಾರೆ.ಅದರಂತೆ ರೋಹಿತ್ ಕೂಡಾ ಕೈ ಮೇಲೆ ರೆಪ್ಪೆಯಿಟ್ಟು ಏನೋ ಕೇಳಿಕೊಳ್ಳುತ್ತಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ರೋಹಿತ್ ಏನು ಕೇಳಿರಬಹುದು ಎಂದು ಫ್ಯಾನ್ಸ್ ತಮಾಷೆ ಮಾಡುತ್ತಿದ್ದಾರೆ.