ರಾಯ್ಪುರ: ಭಾರತ ಮತ್ತು ದಕ್ಷಿಣ ಆಫ್ರಿಕಾ ಏಕದಿನ ಸರಣಿಯಲ್ಲಿ ಟೆಸ್ಟ್ ಮಾದರಿಯಲ್ಲಿ ಬ್ಯಾಟಿಂಗ್ ಮಾಡುತ್ತಿರುವ ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ಬಗ್ಗೆ ಫ್ಯಾನ್ಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೀಂ ಇಂಡಿಯಾದಲ್ಲಿ ಈ ಇಬ್ಬರೂ ಯಾಕೆ ಸ್ಥಾನ ಪಡೆಯುತ್ತಿದ್ದಾರೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ವಾಷಿಂಗ್ಟನ್ ಸುಂದರ್ ಟೆಸ್ಟ್ ಗೆ ಹೇಳಿ ಮಾಡಿಸಿದ ಆಟಗಾರ. ಆದರೆ ಅವರನ್ನು ಆಲ್ ರೌಂಡರ್ ಎಂದು ಏಕದಿನ ಪಂದ್ಯದಲ್ಲಿ ಅವಕಾಶ ನೀಡುತ್ತಿರುವುದಕ್ಕೆ ಗಂಭೀರ್ ವಿರುದ್ಧ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ಷರ್ ಪಟೇಲ್ ರಂತಹ ಸೀಮಿತ ಓವರ್ ಗಳಿಗೆ ಹೇಳಿಮಾಡಿಸಿದ ಆಲ್ ರೌಂಡರ್ ಕೈಬಿಟ್ಟು ವಾಷಿಂಗ್ಟನ್ ಸುಂದರ್ ಗೆ ಯಾವ ಲೆಕ್ಕದಲ್ಲಿ ಅವಕಾಶ ಕೊಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ರವೀಂದ್ರ ಜಡೇಜಾರದ್ದೂ ಇದೇ ಕತೆ. ನಿನ್ನೆಯ ಪಂದ್ಯದಲ್ಲಿ ಫಿನಿಶರ್ ಆಗಬೇಕಿದ್ದ ಅವರು 24 ರನ್ ಗಳಿಸಿದ್ದು 27 ಬಾಲ್ ಎದುರಿಸಿದ್ದರು! ಬಹುಶಃ ಕೆಎಲ್ ರಾಹುಲ್ ನಿನ್ನೆ ಕೊನೆಯಲ್ಲಿ ಅಬ್ಬರಿಸದೇ ಹೋಗಿದ್ದರೆ ತಂಡ 350 ಪ್ಲಸ್ ರನ್ ಗಳಿಸುವುದು ಸಾಧ್ಯವಾಗುತ್ತಿರಲಿಲ್ಲ. ಬೌಲಿಂಗ್ ನಲ್ಲೂ ಜಡೇಜಾರಿಂದ ಹೇಳಿಕೊಳ್ಳುವ ಸಾಧನೆಯಿಲ್ಲ. ಹೀಗಿರುವಾಗ ಟೆಸ್ಟ್ ಶೈಲಿಯಲ್ಲಿ ಆಡುವ ಈ ಇಬ್ಬರನ್ನು ಏಕದಿನದಲ್ಲಿ ಯಾಕೆ ಹಾಕಿಕೊಂಡಿದ್ದೀರಿ ಎಂದು ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.