ರಾಯ್ಪುರ: ಟೀಂ ಇಂಡಿಯಾದಲ್ಲಿ ಕೋಚ್ ಮತ್ತು ಸೀನಿಯರ್ ಆಟಗಾರರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಈಗ ಜಗಜ್ಜಾಹೀರಾಗಿದೆ. ಕೋಚ್ ಗೌತಮ್ ಗಂಭೀರ್ ವಿರುದ್ಧ ಸೀನಿಯರ್ ಆಟಗಾರರು ಅಸಮಾಧಾನಗೊಂಡಿರುವುದು ಯಾಕೆ ಎಂಬುದರ ಕಾರಣ ಈಗ ಬಯಲಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದ ಬಳಿಕ ಸೀನಿಯರ್ ಆಟಗಾರರು ಮತ್ತು ಗಂಭೀರ್ ನಡುವಿನ ವೈಮನಸ್ಯ ಬಟಾಬಯಲಾಗಿತ್ತು. ಹಿರಿಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಕೋಚ್ ಜೊತೆ ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಿಲ್ಲ. ರೋಹಿತ್ ಜೊತೆ ಗಂಭೀರ್ ವಾಗ್ವಾದ ನಡೆಸುತ್ತಿದ್ದರು.
ಇದೆಲ್ಲಾ ಬೆಳವಣಿಗೆ ನಡುವೆ ಬಿಸಿಸಿಐ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರಿಗೆ ಬುಲಾವ್ ನೀಡಿದ್ದು ಸಭೆ ನಡೆಸಲು ತೀರ್ಮಾನಿಸಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಈ ಸಭೆಯಲ್ಲಿ ಪಾಲ್ಗೊಳ್ಳುತ್ತಾರಾ ಎನ್ನುವುದು ಸ್ಪಷ್ಟವಾಗಿಲ್ಲ. ಅಷ್ಟಕ್ಕೂ ಗಂಭೀರ್ ಮತ್ತು ಸೀನಿಯರ್ ಆಟಗಾರರ ನಡುವಿನ ವೈಮನಸ್ಯಕ್ಕೆ ಕಾರಣವೇನು?
ಗೌತಮ್ ಗಂಭೀರ್ ಕೋಚ್ ಆದ ಬಳಿಕ ತಂಡದಲ್ಲಿ ಎಲ್ಲವೂ ಅವರು ಹೇಳಿದ್ದೇ ನಡೆಯಬೇಕು ಎನ್ನುವ ಧೋರಣೆಯಿದೆ. ಹಿರಿಯ ಆಟಗಾರರ ಅಭಿಪ್ರಾಯಗಳಿಗೆ ಅವರು ಬೆಲೆಯೇ ಕೊಡುತ್ತಿಲ್ಲ. ಅವರು ಹೇಳಿದ ಮೇಲೆ ಯಾರೂ ನಿರ್ಧಾರ ಪ್ರಶ್ನಿಸುವಂತಿಲ್ಲ ಎಂಬುದು ಹಿರಿಯ ಆಟಗಾರರ ಆರೋಪವಾಗಿದೆ. ಅಲ್ಲದೆ, ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ ನಮಗೆ ಪ್ರತ್ಯೇಕವಾಗಿ ಅಭ್ಯಾಸಕ್ಕೆ ಅವಕಾಶ ಕೊಡಿ ಎಂದು ಸೀನಿಯರ್ ಆಟಗಾರರು ಕೇಳಿದ್ದರು. ಆದರೆ ಗಂಭೀರ್ ಅದಕ್ಕೆ ಅವಕಾಶ ನೀಡಲಿಲ್ಲ ಎನ್ನಲಾಗಿದೆ.
ಗಂಭೀರ್ ಕೋಚ್ ಆದ ಬೆನ್ನಲ್ಲೇ ರೋಹಿತ್, ಕೊಹ್ಲಿ ದಿಡೀರ್ ಆಗಿ ಟೆಸ್ಟ್ ಮಾದರಿಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಈ ಇಬ್ಬರು ಹಿರಿಯ ಆಟಗಾರರು ಏಕದಿನ ಮಾದರಿಯಲ್ಲೂ ಮುಂದುವರಿಯುವುದು ಗಂಭೀರ್, ಅಗರ್ಕರ್ ಗೆ ಇಷ್ಟವಿಲ್ಲ ಎನ್ನಲಾಗಿದೆ. ಆದರೆ 2027 ರ ಏಕದಿನ ವಿಶ್ವಕಪ್ ವರೆಗೆ ತಂಡದಲ್ಲಿ ಮುಂದುವರಿಯಲು ಶಪಥ ಮಾಡಿರುವ ಈ ಆಟಗಾರರು ತಮ್ಮ ಪ್ರದರ್ಶನದ ಮೂಲಕವೇ ಉತ್ತರ ನೀಡುತ್ತಿದ್ದಾರೆ. ಇದು ಗಂಭೀರ್ ಗೆ ನುಂಗಲಾರದ ತುತ್ತಾಗಿದೆ. ಈ ಕಾರಣಕ್ಕೇ ತಂಡದಲ್ಲಿ ಒಡಕು ಹೆಚ್ಚಾಗಿದೆ ಎನ್ನಲಾಗುತ್ತಿದೆ.