ಕೋಲ್ಕೊತ್ತಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಗೆ ಮೊಹಮ್ಮದ್ ಶಮಿಯವರನ್ನು ಯಾಕೆ ಆಯ್ಕೆ ಮಾಡಿಲ್ಲ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಅವರು ಕೊಟ್ಟ ಉತ್ತರ ಹೀಗಿತ್ತು.
ಕಳೆದ ಒಂದು ವರ್ಷದಿಂದ ಫಿಟ್ನೆಸ್ ನೆಪದಿಂದ ಮೊಹಮ್ಮದ್ ಶಮಿಯನ್ನು ಯಾವುದೇ ಫಾರ್ಮ್ಯಾಟ್ ಗೆ ಆಯ್ಕೆ ಮಾಡುತ್ತಿಲ್ಲ. ಆದರೆ ಈ ನಡುವೆ ಅವರು ದೇಶೀಯ ಕ್ರಿಕೆಟ್ ನಲ್ಲಿ ಆಡುತ್ತಿದ್ದು ನಾನು ಫಿಟ್ ಆಗಿದ್ದೇನೆ ಎನ್ನುತ್ತಿದ್ದಾರೆ. ಆದರೆ ಆಯ್ಕೆ ಸಮಿತಿ ಮಾತ್ರ ಫಿಟ್ನೆಸ್ ನೆಪ ಹೇಳುತ್ತಿರುವುದರಿಂದ ವಿವಾದವಾಗುತ್ತಿದೆ.
ಇದೀಗ ಶಮಿ ತವರಿನಲ್ಲಿಯೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಆದರೆ ಈ ಸರಣಿಗೂ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಈ ಬಗ್ಗೆ ಪತ್ರಕರ್ತರು ಇಂದು ಶುಭಮನ್ ಗಿಲ್ ಗೆ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿದ ಅವರು ಶಮಿಯವರ ಸಾಮರ್ಥ್ಯಕ್ಕೆ ಸಮನಾಗಿ ಬೌಲಿಂಗ್ ಮಾಡಬಹುದಾದ ಬೌಲರ್ ಗಳು ಹೆಚ್ಚು ಸಂಖ್ಯೆಯಲ್ಲಿಲ್ಲ. ಆದರೆ ಈಗ ತಂಡದಲ್ಲಿರುವ ಬೌಲರ್ ಗಳು ಅತ್ಯುತ್ತಮ ಬೌಲರ್ ಗಳಾಗಿದ್ದಾರೆ. ಶಮಿ ಭಾಯಿಯಂತಹ ಆಟಗಾರರನ್ನು ಹೊರಗಿಡುವುದು ಸುಲಭದ ಮಾತಲ್ಲ. ಆದರೆ ಈ ಪ್ರಶ್ನೆಗೆ ಸರಿಯಾದ ಸಮರ್ಥನೆಯನ್ನು ಆಯ್ಕೆ ಸಮಿತಿಯೇ ನೀಡವುದು ಸೂಕ್ತ ಎನಿಸುತ್ತದೆ ಎಂದಿದ್ದಾರೆ.