ಮುಂಬೈ: ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ನಡೆಯಲಿರುವ ನಾಲ್ಕು ದಿನಗಳ ಎರಡು ಪಂದ್ಯಗಳಿಗಾಗಿ ಭಾರತ ಎ ತಂಡವನ್ನು ಆಯ್ಕೆ ಮಾಡಲಾಗಿದ್ದು ಇದನ್ನು ನೋಡಿದರೆ ಬಿಸಿಸಿಐ ಮೂವರು ಪ್ರತಿಭಾವಂತ ಕ್ರಿಕೆಟಿಗರ ಭವಿಷ್ಯವನ್ನೇ ಕೊಂದು ಹಾಕಿತಾ ಎಂಬ ಅನುಮಾನ ಮೂಡುತ್ತದೆ.
ಮೊಹಮ್ಮದ್ ಶಮಿ: 2023 ರ ಏಕದಿನ ವಿಶ್ವಕಪ್ ಹೀರೋ ಮೊಹಮ್ಮದ್ ಶಮಿ. ಆ ಟೂರ್ನಿ ಬಳಿಕ ಅವರು ಶಸ್ತ್ರಚಿಕಿತ್ಸೆಗೊಳಗಾದರು. ಇದಾಗಿ ಅವರು ಚೇತರಿಸಿಕೊಂಡು ವರ್ಷ ಕಳೆದರೂ ಇದುವರೆಗೆ ಬಿಸಿಸಿಐ ಅವರನ್ನು ಯಾವುದೇ ಸರಣಿಗೆ ಆಯ್ಕೆ ಮಾಡುತ್ತಿಲ್ಲ. ಈ ನಡುವೆ ಕಾಟಾಚಾರಕ್ಕೆಂಬಂತೆ ಒಂದು ಸರಣಿಗೆ ಆಯ್ಕೆ ಮಾಡಿದರೂ ಅವರಿಗೆ ಸರಿಯಾಗಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದಾದ ಬಳಿಕ ಅವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ದೇಶೀಯ ಕ್ರಿಕೆಟ್ ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದರೂ ಫಿಟ್ನೆಸ್ ಕಾರಣ ನೀಡಿ ಅವರನ್ನು ಹೊರಗಿಡಲಾಗುತ್ತಿದೆ. ಕೊನೆಗೆ ಬೇಸರ ತಡೆಯಲಾರದೇ ಅವರು ಅಸಮಾಧಾನ ಹೊರಹಾಕಿದರೆ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಆಕ್ರೋಶ ವ್ಯಕ್ತಪಡಿಸಿದ್ದರು. ಫಿಟ್ ಇದ್ದರೆ ನನಗೆ ಹೇಳಬೇಕಿತ್ತು, ಮುಂದೆ ನೋಡೋಣ ಎಂದಿದ್ದರು. ಆದರೆ ಈಗ ಎ ತಂಡದಲ್ಲೂ ಅವರಿಗೆ ಸ್ಥಾನ ನೀಡಲಾಗಿಲ್ಲ.
ಸರ್ಫರಾಜ್ ಖಾನ್: ಕಳೆದ ಆಸ್ಟ್ರೇಲಿಯಾ ಸರಣಿ ವೇಳೆ ಸರ್ಫರಾಜ್ ಖಾನ್ ತಂಡದ ವಿಚಾರವನ್ನು ಲೀಕ್ ಮಾಡಿದ್ದರು ಎಂಬ ಗುಸು ಗುಸು ಹರಡಿತ್ತು. ಅದಾದ ಬಳಿಕ ಸರ್ಫರಾಜ್ ಖಾನ್ ತಂಡದಿಂದ ಸೈಡ್ ಲೈನ್ ಆದರು. ಈ ನಡುವೆ ಅವರು ತೂಕ ಇಳಿಸಿಕೊಂಡು ಮತ್ತಷ್ಟು ಫಿಟ್ ಆಗಿ ದೇಶೀಯ ಕ್ರಿಕೆಟ್ ನಲ್ಲಿ ಮಿಂಚಿದರು. ಆದರೆ ಆದರೂ ಅವರಿಗೆ ಈಗ ಎ ತಂಡದಲ್ಲೂ ಅವಕಾಶ ಕೊಟ್ಟಿಲ್ಲ. ವಿಚಿತ್ರವೆಂದರೆ ಅವರನ್ನು ಹೊರಗಿಡಲು ರಿಷಬ್ ಪಂತ್ ಆಯ್ಕೆ ಮಾಡಿರುವ ನೆಪ ಕೊಡಲಾಗಿದೆ. ಸರ್ಫರಾಜ್ ಖಾನ್ ನಂ.5 ಸ್ಥಾನದಲ್ಲಿ ಆಡುತ್ತಾರೆ. ಈಗ ತಂಡದ ನಾಯಕರಾಗಿ ಆಯ್ಕೆಯಾಗಿರುವ ರಿಷಭ್ ಕೂಡಾ 5 ನೇ ಕ್ರಮಾಂಕದಲ್ಲಿ ಆಡುವ ಕಾರಣ ಸರ್ಫರಾಜ್ ಗೆ ಕೊಕ್ ನೀಡಲಾಗಿದೆಯಂತೆ!
ಇಶಾನ್ ಕಿಶನ್: ಈ ಹಿಂದೆ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ಆಯ್ಕೆಯಾಗಿ ಕೊನೆಯ ಕ್ಷಣದಲ್ಲಿ ಮಾನಸಿಕ ಸುಸ್ತು ಎಂದು ತಂಡದಿಂದ ಹಿಂದೆ ಸರಿದಿದ್ದ ಇಶಾನ್ ಇದೀಗ ಐಪಿಎಲ್, ದೇಶೀಯ ಕ್ರಿಕೆಟ್ ನಲ್ಲಿ ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುತ್ತಿಲ್ಲ. ಇದಕ್ಕೂ ಕಾರಣ ಸ್ಪಷ್ಟತೆಯಿಲ್ಲ.
ಈ ಮೂವರೂ ಕ್ರಿಕೆಟಿಗರನ್ನು ಕಡೆಗಣಿಸುತ್ತಿರುವುದಕ್ಕೆ ಸ್ಪಷ್ಟ ಕಾರಣಗಳೇ ನೀಡುತ್ತಿಲ್ಲ. ಆದರೆ ಯಾವುದೋ ಕಾರಣಗಳಿಗೆ ಈ ಮೂವರು ಪ್ರತಿಭಾವಂತ ಕ್ರಿಕೆಟಿಗರ ಭವಿಷ್ಯವೇ ಕೊಲೆಯಾಗುತ್ತಿದೆ ಎನ್ನುವುದಂತೂ ಸತ್ಯ.