ಕೋಲ್ಕತ್ತಾ: ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಂಡಕ್ಕೆ ಆಯ್ಕೆಯೇ ಆಗುತ್ತಿಲ್ಲ. ಇದರ ಬಗ್ಗೆ ಅವರೇ ಶಾಕಿಂಗ್ ವಿಚಾರವೊಂದನ್ನು ಹೊರಹಾಕಿದ್ದಾರೆ.
ಕಳೆದ ಏಕದಿನ ವಿಶ್ವಕಪ್ ಹೀರೋ ಆಗಿದ್ದ ಮೊಹಮ್ಮದ್ ಶಮಿ ಬಳಿಕ ಗಾಯದಿಂದಾಗಿ ಕೆಲವು ತಿಂಗಳು ಕ್ರಿಕೆಟ್ ನಿಂದ ದೂರವುಳಿದರು. ಆದರೆ ಗೌತಮ್ ಗಂಭೀರ್ ಕೋಚ್ ಆದ ಬಳಿಕ ಅವರು ತಂಡಕ್ಕೆ ಆಯ್ಕೆಯೇ ಆಗುತ್ತಿಲ್ಲ. ಈ ಬಗ್ಗೆ ಹಲವರು ಪ್ರಶ್ನೆ ಮಾಡುತ್ತಲೇ ಇದ್ದಾರೆ. ಆದರೆ ಆಯ್ಕೆ ಸಮಿತಿ ಅವರು ಇನ್ನೂ ತಯಾರಾಗಿಲ್ಲ ಎಂಬ ಹಾರಿಕೆಯ ಉತ್ತರ ನೀಡುತ್ತಲೇ ಇದೆ.
ಈ ಬಗ್ಗೆ ಖುದ್ದು ಮೊಹಮ್ಮದ್ ಶಮಿಯೇ ಈಗ ಅಸಮಾಧಾನ ಹೊರಹಾಕಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾನು ದುಲೀಪ್ ಟ್ರೋಫಿ ಆಡಲು ಸಿದ್ಧನಾಗಿದ್ದೆನೆ. ಈ ಟೂರ್ನಿಯಲ್ಲಿ ಕಣಕ್ಕಿಳಿಯಲು ಫಿಟ್ ಆಗಿರುವ ನನಗೆ ಟಿ20 ಕ್ರಿಕೆಟ್ ಆಡಲು ಸಾಧ್ಯವಾಗುವುದಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಮೊನ್ನೆಯಷ್ಟೇ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿತ್ತು. ಆದರೆ ಈ ತಂಡದಲ್ಲಿ ತಮ್ಮನ್ನು ಪರಿಗಣಿಸದೇ ಇರುವುದಕ್ಕೆ ಶಮಿ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನನ್ನು ಆಯ್ಕೆ ಮಾಡದೇ ಇರುವುದರ ಬಗ್ಗೆ ಯಾರನ್ನೂ ದೂಷಿಸಲ್ಲ. ನನಗೆ ಒಂದು ಅವಕಾಶ ಕೊಡಿ. ಸರಿಯಾಗಿಲ್ಲದಿದ್ದರೆ ನನ್ನನ್ನು ಪರಿಗಣಿಸಬೇಡಿ. ಅವಕಾಶ ಸಿಕ್ಕಾಗ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ. ಅವರ ಹೇಳಿಕೆ ಗಮನಿಸಿದರೆ ಏಕದಿನ ವಿಶ್ವಕಪ್ ಹೀರೋಗೆ ಇಂಥಾ ಸ್ಥಿತಿಯೇ ಎಂಬ ಬೇಸರವಾಗುತ್ತದೆ.