ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಐಪಿಎಲ್‌ಗೂ ನಿವೃತ್ತಿ ಘೋಷಣೆ ಮಾಡಿದ್ದಾರೆ.
38 ವರ್ಷದ ಅಶ್ವಿನ್ ಅವರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವ ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬುಧವಾರ ಐಪಿಎಲ್ ಕ್ರಿಕೆಟ್ ಮಾದರಿಗೂ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಪ್ರತಿಯೊಂದು ಅಂತ್ಯವೂ ಹೊಸ ಆರಂಭವನ್ನು ಹೊಂದಿರುತ್ತದೆ. ಐಪಿಎಲ್ ಕ್ರಿಕೆಟಿಗನಾಗಿ ನನ್ನ ಅವಧಿ ಮುಗಿದಿದೆ ಎಂದು ಅವರು ಬರೆದುಕೊಂಡಿದ್ದಾರೆ. ಅವರು 2009ರಲ್ಲಿ ಚೈನ್ನೈ ಸೂಪರ್ ಕಿಂಗ್ಸ್ ಮೂಲಕ ಅಶ್ವಿನ್ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು.
ಉತ್ತಮ ಸಂಬಂಧ, ಅದ್ಭುತ ನೆನಪುಗಳನ್ನು ನೀಡಿದ್ದಕ್ಕೆ ಎಲ್ಲಾ ಫ್ರಾಂಚೈಸಿಗಳಿಗೆ ಹಾಗೂ, ಇಲ್ಲಿಯವರೆಗೆ ಅವಕಾಶ ನೀಡಿದ್ದಕ್ಕೆ ಐಪಿಎಲ್ ಹಾಗೂ ಬಿಸಿಸಿಐಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ. ಮುಂದಿನ ಐಪಿಎಲ್ ಆವೃತ್ತಿಗೆ ತಂಡದಲ್ಲಿ ಉಳಿಸಿಕೊಳ್ಳುವ ಬಗ್ಗೆ ಅವರು ಚೆನ್ನೈ ತಂಡದಿಂದ ಸ್ಪಷ್ಟನೆ ಕೇಳಿದ್ದರು. ಅದರ ಬೆನ್ನಲ್ಲೇ ಈ ನಿರ್ಧಾರಕ್ಕೆ ಬಂದಿದ್ದಾರೆ.
ಐದು ಐಪಿಎಲ್ ತಂಡಗಳಲ್ಲಿ ಕಾಣಿಸಿಕೊಂಡಿದ್ದ ಆರ್.ಅಶ್ವಿ ನ್, ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ನಾಯಕರೂ ಆಗಿದ್ದರು. ನಂತರದ ದಿನಗಳಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್, ದಿಲ್ಲಿ ಕಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಟಗಾರರಾಗಿ ಕಾಣಿಸಿಕೊಂಡಿದ್ದರು.
221 ಐಪಿಎಲ್ ಪಂದ್ಯಗಳಲ್ಲಾಡಿರುವ ಆರ್.ಅಶ್ವಿನ್, ಒಟ್ಟು 187 ವಿಕೆಟ್ ಗಳನ್ನು ಪಡೆದಿದ್ದಾರೆ. ಐಪಿಎಲ್ ಮಾದರಿಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ಆರ್.ಅಶ್ವಿನ್ ಐದನೇ ಸ್ಥಾನದಲ್ಲಿದ್ದಾರೆ.