ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಅನಾರೋಗ್ಯದಿಂದ ಬಳಲುತ್ತಿದ್ದು ತಮ್ಮ ಬ್ಲಡ್ ಟೆಸ್ಟ್ ವರದಿಯನ್ನು ಬಿಸಿಸಿಐಗೆ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದರು. ಅಲ್ಲದೆ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಳ್ಳಲು ಯಶಸ್ವಿಯಾಗಿದ್ದರು.
ಇದೀಗ ಅವರು ಅನಾರೋಗ್ಯಕ್ಕೀಡಾಗಿದ್ದು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲಾ ಸರಿ ಹೋಗಿದ್ದರೆ ಅವರು ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಉತ್ತರ ವಲಯದ ನಾಯಕರಾಗಬೇಕಿತ್ತು. ಆದರೆ ಈಗ ಅನಾರೋಗ್ಯದ ಕಾರಣದಿಂದ ದುಲೀಪ್ ಟ್ರೋಫಿಯಿಂದ ವಿನಾಯ್ತಿ ನೀಡುವಂತೆ ಕೋರಿದ್ದಾರೆ.
ರಾಷ್ಟ್ರೀಯ ತಂಡದ ಘಟಾನುಘಟಿ ಆಟಗಾರರೂ ದೇಶೀಯ ಕ್ರಿಕೆಟ್ ನಲ್ಲಿ ಆಡುವುದು ಕಡ್ಡಾಯ ಎಂದು ಬಿಸಿಸಿಐ ನಿಯಮವಿದೆ. ಹೀಗಾಗಿ ಈಗ ಗಿಲ್ ಕೂಡಾ ದುಲೀಪ್ ಟ್ರೋಫಿ ಆಡಬೇಕಿತ್ತು. ಆದರೆ ಅನಾರೋಗ್ಯದ ಕಾರಣದಿಂದ ಅವರು ಹೊರಗುಳಿಯಬಹುದು. ಸೆಪ್ಟೆಂಬರ್ 5 ರಿಂದ ಟೀಂ ಇಂಡಿಯಾ ಏಷ್ಯಾಕಪ್ ಗೆ ತಯಾರಿ ನಡೆಸಬೇಕಿದೆ. ಈ ವೇಳೆ ಅವರು ಚೇತರಿಸಿಕೊಳ್ಳುವ ವಿಶ್ವಾಸವಿದೆ.