ಮುಂಬೈ: 2023 ರ ಏಕದಿನ ವಿಶ್ವಕಪ್ ಹೀರೋ ಮೊಹಮ್ಮದ್ ಶಮಿ ಇದಾದ ಬಳಿಕ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದ್ದೇ ವಿರಳ. ಇದೀಗ ಆಯ್ಕೆ ಸಮಿತಿ ವಿರುದ್ಧ ನೇರವಾಗಿ ಅವರು ವಾಗ್ದಾಳಿ ನಡೆಸಿದ್ದಾರೆ.
ಪ್ರತೀ ಬಾರಿಯೂ ತಂಡದ ಆಯ್ಕೆ ನಡೆಸುವಾಗ ಮೊಹಮ್ಮದ್ ಶಮಿ ಆಯ್ಕೆಯಾಗುತ್ತಾರೇನೋ ಎಂಬ ನಿರೀಕ್ಷೆಗಳಿರುತ್ತವೆ. ಆದರೆ ಪ್ರತೀ ಬಾರಿಯೂ ಅವರನ್ನು ಫಿಟ್ನೆಸ್ ನೆಪ ಹೇಳಿ ತಂಡಕ್ಕೆ ಆಯ್ಕೆ ಮಾಡಲಾಗುವುದಿಲ್ಲ.
ಇದೀಗ ಇದೇ ವಿಚಾರವಾಗಿ ಮೊಹಮ್ಮದ್ ಶಮಿ ನೇರವಾಗಿ ಆಯ್ಕೆ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಂಗಾಳ ಪರ ರಣಜಿ ಪಂದ್ಯವಾಡಲು ಈಡನ್ ಗಾರ್ಡನ್ ಮೈದಾನಕ್ಕೆ ಬಂದಿದ್ದಾಗ ಸಂದರ್ಶಕರು ನೀವು ಫಿಟ್ ಆಗಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿರುವ ಅವರು ನಾನು ಫಿಟ್ ಆಗಿಯೇ ಇದ್ದೇನೆ. ಹಾಗಿದ್ದರೂ ನನ್ನನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗುತ್ತಿಲ್ಲ. ನಾನು ಫಿಟ್ ಆಗಿದ್ದೇನೆಂದು ನಾನೇ ಆಯ್ಕೆ ಸಮಿತಿಗೆ ಹೇಳಬೇಕೇ? ಇದು ಆಯ್ಕೆ ಸಮಿತಿಯ ಕರ್ತವ್ಯವಲ್ಲವೇ? ಒಂದು ವೇಳೆ ನಾನು ಫಿಟ್ ಆಗಿಲ್ಲ ಅಂದರೆ ಬಂಗಾಳ ಪರ ರಣಜಿ ಆಡುತ್ತಿರಲಿಲ್ಲ. ದುಲೀಪ್ ಟ್ರೋಫಿ ಆಡುತ್ತಿರಲಿಲ್ಲ. ಆಯ್ಕೆ ಸಮಿತಿ ಕರೆ ಕೂಡಾ ಮಾಡಿಲ್ಲ, ನಾನು ಫಿಟ್ ಆಗಿದ್ದೇನಾ ಎಂದು ಕೇಳಿಲ್ಲ. ನಾಲ್ಕು ದಿನದ ಪಂದ್ಯವಾಡಲು ಫಿಟ್ ಆಗಿದ್ದರೆ 50 ಓವರ್ ಗಳ ಪಂದ್ಯವನ್ನೂ ಆಡಬಲ್ಲೆ ಎಂದು ಶಮಿ ವಾಗ್ದಾಳಿ ನಡೆಸಿದ್ದಾರೆ.