ನವದೆಹಲಿ: ಆಸ್ಟ್ರೇಲಿಯಾ ಸರಣಿಯಲ್ಲಿ ಪಾಲ್ಗೊಳ್ಳಲು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಟೀಂ ಇಂಡಿಯಾ ಆಟಗಾರರು ದೆಹಲಿ ವಿಮಾನ ನಿಲ್ದಾಣದಿಂದ ಇಂದು ಬೆಳ್ಳಂ ಬೆಳಿಗ್ಗೆ ತೆರಳಿದ್ದಾರೆ. ಆಟಗಾರರನ್ನು ಬೀಳ್ಕೊಡಲು ಸಾಕಷ್ಟು ಫ್ಯಾನ್ಸ್ ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು.
ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಆಡುತ್ತಿರುವ ಮೊದಲ ಟೀಂ ಇಂಡಿಯಾ ಸರಣಿಯಿದು. ಹೀಗಾಗಿ ಈ ಸರಣಿಗೆ ವಿಶ್ವಕಪ್ ಲೆವೆಲ್ ನ ಮಹತ್ವ ಬಂದಿದೆ. ಅಭಿಮಾನಿಗಳು ರೋ-ಕೊ ಜೋಡಿಯನ್ನು ಮೈದಾನದಲ್ಲಿ ನೋಡಲು ಕಾಯುತ್ತಿದ್ದಾರೆ.
ಇಂದು ಬೆಳಿಗ್ಗೆಯೇ ಒಂದು ಬ್ಯಾಚ್ ನ ಕ್ರಿಕೆಟಿಗರು ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಈ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕೂಡಾ ಇದ್ದಾರೆ ಎಂಬ ಕಾರಣಕ್ಕೆ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಅಭಿಮಾನಿಗಳು ಜಮಾಯಿಸಿದ್ದರು.
ಈ ಸರಣಿಗಾಗಿ ರೋಹಿತ್ ಶರ್ಮಾ ಹೆಚ್ಚು ಸ್ಲಿಮ್ ಆಂಡ್ ಫಿಟ್ ಆಗಿದ್ದಾರೆ. ನಾಯಕತ್ವ ಕಳೆದುಕೊಂಡ ಮೇಲೆ ರೋಹಿತ್ ಹಳೆಯ ಹಿಟ್ ಮ್ಯಾನ್ ಅವತಾರ ಪ್ರದರ್ಶಿಸಬಹುದು ಎಂದು ಅಭಿಮಾನಿಗಳ ಲೆಕ್ಕಾಚಾರ. ಅಕ್ಟೋಬರ್ 19 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಬಳಿಕ ಆಸ್ಟ್ರೇಲಿಯಾದಲ್ಲಿ ಟಿ20 ಸರಣಿ ನಡೆಯಲಿದೆ.