ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆಡಲಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅಭ್ಯಾಸ ನಡೆಸುವುದನ್ನು ನೋಡಲು ದೆಹಲಿಯಲ್ಲಿ ನಡೆಯುತ್ತಿರುವ ಭಾರತ, ವೆಸ್ಟ್ ಇಂಡೀಸ್ ಟೆಸ್ಟ್ ಪಂದ್ಯಕ್ಕೆ ಸೇರಿರುವುದಕ್ಕಿಂತಲೂ ಹೆಚ್ಚು ಜನ ಸೇರಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದೇ ಕಾರಣಕ್ಕೆ ಬಿಸಿಸಿಐ ಈಗ ಫುಲ್ ಟ್ರೋಲ್ ಆಗಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿದೆ. ಅದರೆ ಈ ಪಂದ್ಯ ವೀಕ್ಷಿಸಲು ಪ್ರೇಕ್ಷಕರೇ ಇಲ್ಲ. ಖಾಲಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ.
ಆದರೆ ಇತ್ತ ಮುಂಬೈನಲ್ಲಿ ಲೋಕಲ್ ಮೈದಾನದಲ್ಲಿ ರೋಹಿತ್ ಶರ್ಮಾ ಆಸ್ಟ್ರೇಲಿಯಾ ಸರಣಿಗೆ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಅವರಿಗೆ ಮಾಜಿ ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್ ಸಾಥ್ ನೀಡಿದ್ದಾರೆ. ವಿಶೇಷವೆಂದರೆ ರೋಹಿತ್ ಅಭ್ಯಾಸ ನಡೆಸುವುದನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳ ದಂಡೇ ಸೇರಿತ್ತು.
ಎಷ್ಟರಮಟ್ಟಿಗೆ ಎಂದರೆ ಕೊನೆಗೆ ರೋಹಿತ್ ಗೆ ಮರಳಿ ಹೋಗಲು ಕಷ್ಟವಾಗಿತ್ತು. ಕೊನೆಗೆ ಅಭಿಷೇಕ್ ನಾಯರ್ ಜನರ ಬಳಿ ಹೋಗಿ ರೋಹಿತ್ ಗೆ ಹೋಗಲು ಅನುವು ಮಾಡಿಕೊಡಿ ಎಂದು ಕೇಳಬೇಕಾಯಿತು. ಇದೇ ವಿಚಾರವಾಗಿ ನೆಟ್ಟಿಗರು ಬಿಸಿಸಿಐಯನ್ನು ಟ್ರೋಲ್ ಮಾಡಿದ್ದು ರೋಹಿತ್ ಈಗಲೂ ಜನರಿಗೆ ಎಷ್ಟು ಹತ್ತಿರವಾಗಿದ್ದಾರೆ ಎಂದು ಸರಿಯಾಗಿ ನೋಡಿ ಎಂದಿದ್ದಾರೆ.