ಅಹಮದಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಖಾಲಿ ಖಾಲಿ ಮೈದಾನದಲ್ಲಿ ಟೀಂ ಇಂಡಿಯಾ ಬ್ಯಾಟಿಗರದ್ದೇ ಅಬ್ಬರ. ಎರಡನೇ ದಿನದಂತ್ಯಕ್ಕೆ ಭಾರತ 5 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿದೆ.
ಇಂದು ಟೀಂ ಇಂಡಿಯಾ ಬ್ಯಾಟಿಗರಿಂದ ಹ್ಯಾಟ್ರಿಕ್ ಶತಕ ದಾಖಲಾಗಿದೆ. ನಿನ್ನೆ ಅಜೇಯರಾಗುಳಿದಿದ್ದ ಕೆಎಲ್ ರಾಹುಲ್ ಇಂದು ಮೊದಲಿಗರಾಗಿ ಶತಕ ಗಳಿಸಿದರು. ಅವರ ಹಿಂದೆಯೇ ವಿಕೆಟ್ ಕೀಪರ್ ಧ್ರುವ ಜ್ಯುರೆಲ್ ಕೂಡಾ 125 ರನ್ ಸಿಡಿಸಿದರು. ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಅವರ ಮೊದಲ ಶತಕವಾಗಿತ್ತು.
ಅವರ ಬೆನ್ನಲ್ಲೇ ರವೀಂದ್ರ ಜಡೇಜಾ ಕೂಡಾ ಶತಕ ಸಿಡಿಸಿದ್ದಾರೆ. ಜಡೇಜಾ ಪಾಲಿಗೆ ಇದು ಆರನೇ ಟೆಸ್ಟ್ ಶತಕವಾಗಿತ್ತು. ಟೆಸ್ಟ್ ನಂ.1 ಆಲ್ ರೌಂಡರ್ ಗೆ ಇದು ಈ ವರ್ಷದ ಎರಡನೇ ಶತಕವಾಗಿತ್ತು. ಜಡೇಜಾ ಈಗ 104 ರನ್ ಗಳಿಸಿ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅವರಿಗೆ ಸಾಥ್ ನೀಡುತ್ತಿರುವ ವಾಷಿಂಗ್ಟನ್ ಸುಂದರ್ 9 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ ನಲ್ಲಿ 162 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ ಇದೀಗ 5 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿದ್ದು ಬರೋಬ್ಬರಿ 286 ರನ್ ಗಳ ಬೃಹತ್ ಮುನ್ನಡೆ ಪಡೆದಿದೆ. ಈ ಟೆಸ್ಟ್ ಪಂದ್ಯ ದೇಶದ ಅತೀ ದೊಡ್ಡ ಮೈದಾನ ಅಹಮದಾಬಾದ್ ನಲ್ಲಿ ನಡೆಯುತ್ತಿದೆ. ಆದರೆ ಪ್ರೇಕ್ಷಕರಿಲ್ಲದೇ ಮೈದಾನವಿಡೀ ಬಣಗುಡುತ್ತಿದೆ.