ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದ್ದು ಮತ್ತೆ ಹಿರಿಯ ವೇಗಿ ಮೊಹಮ್ಮದ್ ಶಮಿಯನ್ನು ಕಡೆಗಣಿಸಲಾಗಿದೆ. ಇದಕ್ಕೆ ಫ್ಯಾನ್ಸ್ ಗರಂ ಆಗಿದ್ದಾರೆ.
2023 ರ ಏಕದಿನ ವಿಶ್ವಕಪ್ ಹೀರೋ ಆಗಿದ್ದ ಮೊಹಮ್ಮದ್ ಶಮಿಯನ್ನು ಇತ್ತೀಚೆಗೆ ಎರಡು ವರ್ಷಗಳಿಂದ ಫಿಟ್ನೆಸ್ ನೆಪವೊಡ್ಡಿ ನಿರಂತರವಾಗಿ ತಂಡದಿಂದ ಹೊರಗಿಡಲಾಗುತ್ತಿದೆ. ಈ ವಿಚಾರವಾಗಿ ಸ್ವತಃ ಶಮಿಯೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ನಾನು ಫಿಟ್ ಇದ್ದರೂ ಆಯ್ಕೆ ಸಮಿತಿ ನನ್ನನ್ನು ಪರಿಗಣಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಅಜಿತ್ ಅಗರ್ಕರ್ ಫಿಟ್ ಆಗಿದ್ದರೆ ನಮ್ಮ ಬಳಿ ಹೇಳಬೇಕು. ಅವರು ಫಿಟ್ ಆಗಿದ್ದರೆ ಮುಂದಿನ ದಿನಗಳಲ್ಲಿ ಪರಿಶೀಲಿಸುತ್ತೇವೆ ಎಂದಿದ್ದರು.
ಆದರೆ ಈಗ ದೇಶೀಯ ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದರೂ ಶಮಿಯನ್ನು ಟೀಂ ಇಂಡಿಯಾಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಕಳೆದ ಆಸ್ಟ್ರೇಲಿಯಾ ಸರಣಿಗೆ ಅವರನ್ನು ಪರಿಗಣಿಸಲಿಲ್ಲ. ಏತನ್ಮಧ್ಯೆ ಅವರು ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಆಡಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹಾಗಿದ್ದರೂ ಈಗ ದಕ್ಷಿಣ ಆಫ್ರಿಕಾ ಸರಣಿಯಿಂದ ಅವರನ್ನು ಕೈ ಬಿಡಲಾಗಿದೆ. ಇದು ಅಭಿಮಾನಿಗಳನ್ನು ಕೆರಳಿಸಿದೆ. ಮೊಹಮ್ಮದ್ ಶಮಿ ಏನು ತಪ್ಪು ಮಾಡಿದ್ದಾರೆ ಎಂದು ಅವರನ್ನು ಕಡೆಗಣಿಸಲಾಗುತ್ತಿದೆ? ಒಂದು ವೇಳೆ ಅವರು ದೇಶೀಯ ಕ್ರಿಕೆಟ್ ಆಡಲು ಫಿಟ್ ಆಗಿದ್ದರೆ ರಾಷ್ಟ್ರೀಯ ತಂಡದಲ್ಲೂ ಆಡಬಹುದಲ್ವೇ? ಹಾಗಿದ್ದರೂ ಈ ರಾಜಕೀಯ ಯಾಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.