ಭಾರತ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಭಾನುವಾರ ತಂದೆಯ ದಿನಾಚರಣೆಯಂದು ತಮ್ಮ ತಂದೆಯ ಜತೆ ತೆಗೆಸಿಕೊಂಡ ಗೌರವಾರ್ಹ ಚಿತ್ರವನ್ನು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 2006ರಲ್ಲಿ ಅವರ ತಂದೆ ಮೃತರಾದ ಮರುದಿನವೇ ದಿನವೇ ಡೆಲ್ಲಿ ಪರ ಕ್ರಿಕೆಟ್ ಆಡಲು ಕೊಹ್ಲಿ ಮೈದಾನಕ್ಕೆ ಇಳಿದಿದ್ದರು.
ತಂದೆಯ ದಿನಾಚರಣೆಯಂದು ಚಿತ್ರ ಪೋಸ್ಟ್ ಮಾಡಿದ್ದಲ್ಲದೇ ತನ್ನ ಡ್ಯಾಡ್‌ಗೆ ಭಾವನಾತ್ಮಕ ಸಂದೇಶವನ್ನು ಕೊಹ್ಲಿ ಬರೆದಿದ್ದಾರೆ. ಕೊಹ್ಲಿಯ ತಂದೆ 2006ರ ಡಿಸೆಂಬರ್ 19ರಂದು ಮಧ್ಯಾಹ್ನ 3 ಗಂಟೆಗೆ ಮೃತರಾಗಿದ್ದರು. ಆದರೆ ಅವರ ತಂಡದ ಸಹಆಟಗಾರರು ಆಶ್ಚರ್ಯಗೊಳ್ಳುವಂತೆ ಇನ್ನೂ ಹರೆಯದಲ್ಲಿದ್ದ ಕೊಹ್ಲಿ ತಮ್ಮ ಅಜೇಯ ಆಟವನ್ನು ಮುಂದುವರಿಸಲು ಮರುದಿನವೇ ಆಗಮಿಸಿ 90 ಮೌಲ್ಯಯುತ ರನ್‌ಗಳನ್ನು ಸ್ಕೋರ್ ಮಾಡುವ ಮೂಲಕ ಕರ್ನಾಟಕದ ವಿರುದ್ಧ ಡೆಲ್ಲಿ ಫಾಲೋ ಆನ್ ತಪ್ಪಿಸಿಕೊಳ್ಳಲು ನೆರವಾಗಿದ್ದರು.
ಇತ್ತೀಚೆಗೆ ಸಿಎನ್‌ಎನ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕೊಹ್ಲಿ ಈ ಘಟನೆಯನ್ನು ನೆನಪಿಸಿಕೊಂಡು ಇದು ಅವರ ಜೀವನದ ಅತೀ ಕಠಿಣ ಹಂತ ಎಂದು ಹೇಳಿದರು. ನನ್ನ ತಂದೆ ಮೃತರಾದ ರಾತ್ರಿಯನ್ನು ಈಗಲೂ ನೆನಪಿಸಿಕೊಳ್ಳುತ್ತೇನೆ. ಅದು ನನ್ನ ಜೀವನದ ಅತ್ಯಂತ ಕಠಿಣ ಕಾಲ. ಆದರೆ ತಂದೆಯ ನಿಧನದ ನಂತರ ಮರುದಿನ ಬೆಳಿಗ್ಗೆ ಆಡಬೇಕೆಂದು ನನ್ನ ಅಂತಃಸಾಕ್ಷಿ ನುಡಿಯಿತು.
ಕ್ರಿಕೆಟ್ ಪಂದ್ಯವನ್ನು ಪೂರ್ಣಗೊಳಿಸದೇ ಇರುವುದು ಪಾಪ ಮಾಡಿದ್ದಕ್ಕೆ ಸಮಾನ ಎಂದು ನಾನು ಭಾವಿಸುತ್ತೇನೆ. ಕ್ರಿಕೆಟ್ ನನ್ನ ಜೀವನದಲ್ಲಿ ಗಳಿಸಿದ ಪ್ರಾಮುಖ್ಯತೆ ಎಲ್ಲಕ್ಕಿಂತ ಹೆಚ್ಚು ಎಂದು ಅವರು ಹೇಳಿದರು.
ಕಷ್ಟಕರ ಸನ್ನಿವೇಶಗಳಲ್ಲಿ ದೃಢವಾಗಿ ಉಳಿಯುವುದಕ್ಕೆ ಈ ಘಟನೆ ತನಗೆ ಅವಕಾಶ ಕಲ್ಪಿಸಿತು. ನನ್ನ ತಂದೆಯ ಸಾವು ನನ್ನ ಕನಸುಗಳನ್ನು , ನನ್ನ ತಂದೆಯ ಕನಸುಗಳನ್ನು ಈಡೇರಿಸಲು ಬಲ ನೀಡಿತು ಎಂದು ಕೊಹ್ಲಿ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ