ದುಬೈ: ಟಿ20 ಕ್ರಿಕೆಟ್ ಕ್ಯಾಪ್ಟನ್ ಆದ ಮೇಲೆ ಸೂರ್ಯಕುಮಾರ್ ಯಾದವ್ ಕಳೆಗುಂದಿದ್ರಾ ಎಂಬ ಅನುಮಾನ ಶುರುವಾಗಿದೆ. ಕಳೆದ 10 ಇನಿಂಗ್ಸ್ ಗಳಲ್ಲಿ ಅವರ ಬ್ಯಾಟಿಂಗ್ ಗಮನಿಸಿದರೆ ಈ ಅನುಮಾನ ಬಾರದೇ ಇರದು.
ರೋಹಿತ್ ಶರ್ಮಾ ನೇತೃತ್ವದಲ್ಲಿ ಟಿ20 ವಿಶ್ವಕಪ್ ಗೆದ್ದ ಬಳಿಕ ಅವರು ನಿವೃತ್ತಿಯಾದರು. ರೋಹಿತ್ ನಿವೃತ್ತಿ ಬಳಿಕ ಅಚಾನಕ್ ಆಗಿ ಸೂರ್ಯಕುಮಾರ್ ಯಾದವ್ ಗೆ ಟಿ20 ನಾಯಕತ್ವ ಸಿಕ್ಕಿತು. ಆದರೆ ನಾಯಕನಾಗಿ ಕ್ಲಿಕ್ ಆದ ಸೂರ್ಯ ಬ್ಯಾಟಿಂಗ್ ಮರೆತರಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
ಇದಕ್ಕೆ ಕಾರಣವೂ ಇದೆ. ಟಿ20 ವಿಶ್ವಕಪ್ ಬಳಿಕ ಸೂರ್ಯಕುಮಾರ್ ಯಾದವ್ 20 ಪಂದ್ಯಗಳಲ್ಲಿ 18 ಇನಿಂಗ್ಸ್ ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಅವರು ಗಳಿಸಿದ್ದು ಕೇವಲ 317 ರನ್. ಕೇವಲ 2 ಬಾರಿ ಅರ್ಧಶತಕ ಸಿಡಿಸಿದ್ದಾರೆ. ಅದರಲ್ಲೂ ಕಳೆದ 10 ಇನಿಂಗ್ಸ್ ಗಳಿಂದ ಒಂದೇ ಒಂದು ಅರ್ಧಶತಕವೂ ಇಲ್ಲ.
ಏಷ್ಯಾ ಕಪ್ ನಲ್ಲಿ ಒಮ್ಮೆ 47 ರನ್ ಗಳಿಸಿದ್ದು ಬಿಟ್ಟರೆ ಕಳೆದ 10 ಇನಿಂಗ್ಸ್ ಗಳಲ್ಲಿ ಒಮ್ಮೆಯೂ ಅವರ ಸ್ಕೋರ್ 20 ದಾಟಿಲ್ಲ. ನಿನ್ನೆಯ ಪಂದ್ಯದಲ್ಲೂ 11 ಎಸೆತ ಎದುರಿಸಿ ಗಳಿಸಿದ್ದು ಕೇವಲ 5 ರನ್. ಒಂದು ಕಾಲದಲ್ಲಿ 360 ಹೊಡೆತಗಳ ಕಿಂಗ್, ಟಿ20 ಸ್ಪೆಷಲಿಸ್ಟ್ ಎಂದೆಲ್ಲಾ ಕರೆಯಿಸಿಕೊಂಡಿದ್ದ ಸೂರ್ಯ ನಾಯಕರಾಗುತ್ತಿದ್ದಂತೇ ತಮ್ಮ ಹಳೆಯ ಬ್ಯಾಟಿಂಗ್ ನ್ನೇ ಮರೆತಿದ್ದಾರೆ ಎಂಬುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.