ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಟೀಂ ಇಂಡಿಯಾ ಸೂಪರ್ 4 ಹಂತದ ಎರಡನೇ ಪಂದ್ಯವಾಡಲಿದ್ದು, ಈ ಪಂದ್ಯದಲ್ಲಿ ಟೀಂ ಇಂಡಿಯಾಗೆ ಬಾಂಗ್ಲಾದೇಶ ಎದುರಾಳಿಯಾಗಿದೆ.
ಸೂಪರ್ 4 ಹಂತದ ಮೊದಲ ಪಂದ್ಯವನ್ನು ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಇದೀಗ ಎರಡನೇ ಪಂದ್ಯದ ಸಮಯ.
ಇಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಭಾರತದ ಪಾಲಿಗೆ ಎರಡನೇ ಸೂಪರ್ 4 ಪಂದ್ಯ ನಡೆಯಲಿದೆ. ಲಿಟನ್ ದಾಸ್ ನೇತೃತ್ವದ ಬಾಂಗ್ಲಾ ಪಡೆ ಈ ಬಾರಿ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಆದರೆ ಭಾರತದ ವಿರುದ್ಧ ಬಾಂಗ್ಲಾಕ್ಕೆ ಗೆಲುವು ಅಷ್ಟು ಸುಲಭವಲ್ಲ.
ಟೀಂ ಇಂಡಿಯಾ ಬಹುತೇಕ ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸುವುದು ನಿಶ್ಚಿತವಾಗಿದೆ. ಟಾಸ್ ಗೆದ್ದ ತಂಡ ಇಲ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು. ಈ ಪಂದ್ಯವನ್ನೂ ಗೆದ್ದರೆ ಭಾರತದ ಫೈನಲ್ ಹಾದಿ ಸುಗಮವಾಗಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.