ಮುಂಬೈ: ಮೊದಲ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ಗೆದ್ದ ಬಳಿಕ ಭಾರತೀಯ ಮಹಿಳಾ ಕ್ರಿಕೆಟ್ ತಾರೆಯರ ಸೆಲೆಬ್ರೇಷನ್ ಮುಗಿಲುಮುಟ್ಟಿದೆ. ಇಂದು ಬೆಳ್ಳಂಬೆಳಿಗ್ಗೆಯೇ ಒಂದೇ ಬೆಡ್ ನಲ್ಲಿ ನಾಲ್ವರು ಸ್ನೇಹಿತರು ವಿಶ್ವಕಪ್ ಜೊತೆಗೆ ಪೋಸ್ ಕೊಟ್ಟಿರುವ ಫೋಟೋವೊಂದನ್ನು ಸ್ಮೃತಿ ಮಂಧಾನ ಮತ್ತು ಜೆಮಿಮಾ ರೊಡ್ರಿಗಸ್ ಪ್ರಕಟಿಸಿದ್ದಾರೆ.
ವಿಶ್ವಕಪ್ ಗೆದ್ದ ಬಳಿಕ ಹುಡುಗಿಯರ ಸೆಲೆಬ್ರೇಷನ್ ಹುಡುಗರನ್ನೂ ಮೀರಿಸುವಂತಿತ್ತು. ವಿಶ್ವಕಪ್ ಟ್ರೋಫಿ ಸ್ವೀಕರಿಸಲು ಬರುವಾಗಲೇ ನಾಯಕಿ ಹರ್ಮನ್ ಪ್ರೀತ್ ಕೌರ್ ಡ್ಯಾನ್ಸ್ ಮಾಡಿಕೊಂಡೇ ಬಂದಿದ್ದರು. ಟ್ರೋಫಿ ಜೊತೆಗೂ ಭಾರತೀಯ ಕ್ರಿಕೆಟಿಗರು ಮೈದಾನಕ್ಕೆ ಸುತ್ತು ಹೊಡೆದು ಸಂಭ್ರಮಿಸಿದ್ದರು.
ಕೊನೆಯಲ್ಲಿ ತಂಡದ ಥೀಮ್ ಹಾಡೊಂದನ್ನು ಜೊತೆಯಾಗಿ ಹಾಡಿ ಸಂಭ್ರಮಿಸಿದ್ದರು. ಇದೂ ಸಾಲದೆಂಬಂತೆ ನಾಯಕಿ ಹರ್ಮನ್ ಪ್ರೀತ್ ಕೌರ್, ಹರ್ಲಿನ್ ಡಿಯೋಲ್ ಸೇರಿದಂತೆ ಕ್ರಿಕೆಟಿಗರು ಮೈದಾನದಿಂದ ಬಸ್ ನತ್ತ ತೆರಳುವಾಗಲೂ ಪಂಜಾಬಿ ಹಾಡನ್ನು ಪ್ಲೇ ಮಾಡಿಕೊಂಡು ಡ್ಯಾನ್ಸ್ ಮಾಡಿಕೊಂಡೇ ತೆರಳಿದ್ದಾರೆ.
ಹೋಟೆಲ್ ನಲ್ಲೂ ಸೆಲೆಬ್ರೇಷನ್ ಮುಂದುವರಿದಿತ್ತು. ಸ್ಮೃತಿ ಮಂಧಾನ ಗೆಳೆತಿಯರ ಗ್ಯಾಂಗ್ ಜೆಮಿಮಾ, ಅರುಂದತಿ ರೆಡ್ಡಿ, ರಾಧಾ ಯಾದವ್ ಜೊತೆಗೇ ಒಂದೇ ಬೆಡ್ ನಲ್ಲಿ ವಿಶ್ವಕಪ್ ಟ್ರೋಫಿಯನ್ನು ಇಟ್ಟುಕೊಂಡು ಪೋಸ್ ಕೊಟ್ಟಿದ್ದಾರೆ. ಮೊದಲ ಬಾರಿಗೆ ಕಪ್ ಗೆದ್ದ ಖುಷಿ ಆಟಗಾರರ ಸಂಭ್ರಮ ಮೇರೆ ಮೀರಿಸಿದೆ.