ಮುಂಬೈ: ಭಾರತೀಯ ಕ್ರಿಕೆಟ್ ರಂಗದ ಕಿಂಗ್ ಎಂದೇ ಕರೆಯಿಸಿಕೊಳ್ಳುವ ವಿರಾಟ್ ಕೊಹ್ಲಿ ಇಂದು ಶೂನ್ಯ ಸುತ್ತಿ ಹೀನಾಯ ದಾಖಲೆ ಬರೆದರೆ ಕ್ವೀನ್ ಎಂದು ಕರೆಯಿಸಿಕೊಳ್ಳುವ ಸ್ಮೃತಿ ಮಂಧಾನ ಶತಕ ಗಳಿಸಿ ಮಿಂಚಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಇಂದು ಕಿಂಗ್ ಕೊಹ್ಲಿ ಇಂದು ಶೂನ್ಯ ಸಂಪಾದಿಸಿ ಸತತ ಎರಡನೇ ಬಾರಿಗೆ ಡಕ್ ಔಟ್ ಆದ ಕುಖ್ಯಾತಿಗೆ ಒಳಗಾದರು. ಆದರೆ ಕ್ವೀನ್ ಸ್ಮೃತಿ ಮಂಧಾನ ಇಂದು ನ್ಯೂಜಿಲೆಂಡ್ ವಿರುದ್ಧದ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಅಬ್ಬರಿಸಿದ್ದಾರೆ.
ಭಾರತ ಮಹಿಳಾ ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಭಾರತಕ್ಕೆ ಸ್ಮೃತಿ ಮಂಧಾನ ಮತ್ತು ಪ್ರತೀಕಾ ರಾವಲ್ ಅಬ್ಬರದ ಆರಂಭ ನೀಡಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಗಿಳಿಸಲ್ಪಟ್ಟ ಭಾರತ ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿದೆ.
ಸ್ಮೃತಿ ಮಂಧಾನ ಇಂದು 95 ಎಸೆತ ಎದುರಿಸಿ 109 ರನ್ ಗಳಿಸಿದರು. ಇದರಲ್ಲಿ 10 ಬೌಂಡರಿ 4 ಸಿಕ್ಸರ್ ಸೇರಿತ್ತು. ಇದು ವಿಶ್ವಕಪ್ ನಲ್ಲಿ ಅವರ ಮೂರನೇ ಶತಕವಾಗಿತ್ತು. ಏಕದಿನ ಮಾದರಿಯಲ್ಲಿ ಇದು ಅವರ 14 ನೇ ಶತಕವಾಗಿತ್ತು. ಅವರ ಈ ಭರ್ಜರಿ ಇನಿಂಗ್ಸ್ ಗೆ ಪ್ರೇಕ್ಷಕರು ಎದ್ದು ನಿಂತು ಗೌರವ ಸೂಚಿಸಿದ್ದಾರೆ.
ಇನ್ನು ಸ್ಮೃತಿಗೆ ತಕ್ಕ ಸಾಥ್ ನೀಡಿದ್ದ ಪ್ರತೀಕಾ ರಾವಲ್ ಕೂಡಾ ಶತಕ ದಾಖಲಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಇದು ಅವರ ಎರಡನೇ ಶತಕ. ಆದರೆ ವಿಶ್ವಕಪ್ ನಲ್ಲಿ ಅವರ ಮೊದಲ ಶತಕವಾಗಿತ್ತು. ಯುವ ಬ್ಯಾಟಿಗಳ ಭರ್ಜರಿ ಇನಿಂಗ್ಸ್ ಗೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಒಟ್ಟು 122 ಎಸೆತ ಎದುರಿಸಿದ ಅವರು 100 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.