ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ವಿಜೇತರಾದ ಬಳಿಕ ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧಾನ ಹಿರಿಯ ತಾರೆ ಜೂಲಾನ್ ಗೋಸ್ವಾಮಿ ಬಳಿ ಕ್ಷಮೆ ಕೇಳಿದ್ದಾರೆ. ಇದಕ್ಕೆ ಒಂದು ಕಾರಣವೂ ಇದೆ.
ಭಾರತ ಮಹಿಳಾ ಕ್ರಿಕೆಟ್ ನಲ್ಲಿ ಮಿಂಚಿ ಈಗ ನಿವೃತ್ತಿಯಾದ ತಾರೆಯರ ಪೈಕಿ ಜೂಲಾನ್ ಗೋಸ್ವಾಮಿ ಕೂಡಾ ಪ್ರಮುಖರು. ವೇಗದ ಬೌಲರ್ ಭಾರತದ ಪರ ವಿಶ್ವಕಪ್ ಗಳಲ್ಲಿ ಆಡಿದ್ದರು. ಈ ಹಿಂದೆ ಭಾರತ ತಂಡ ಫೈನಲ್ ಗೆ ತಲುಪಿದ್ದಾಗ ಜೂಲಾನ್ ತಂಡದಲ್ಲಿದ್ದರು. ಆದರೆ ಆಗ ಭಾರತಕ್ಕೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ.
ಕಳೆದ ಬಾರಿ ಅವರಿಗೆ ಕೊನೆಯ ವಿಶ್ವಕಪ್ ಆಗಿತ್ತು. ಹೀಗಾಗಿ ವಿಶ್ವಕಪ್ ಗೆದ್ದು ಜೂಲಾನ್ ಗೆ ತಕ್ಕ ಗೌರವದ ವಿದಾಯ ನೀಡಬೇಕು ಎಂದು ಹರ್ಮನ್, ಸ್ಮೃತಿ ಅಂದುಕೊಂಡಿದ್ದರು. ಸ್ಮೃತಿ ಅಂದು ದೀದಿ, ಈ ಬಾರಿ ನಿಮಗಾಗಿ ಕಪ್ ಗೆಲ್ಲುತ್ತೇವೆ ಎಂದಿದ್ದರಂತೆ. ಆದರೆ ಅದು ಆಗಲೇ ಇಲ್ಲ.
ಆದರೆ ನಿನ್ನೆ ವಿಶ್ವಕಪ್ ಗೆದ್ದ ಬಳಿಕ ಜೂಲಾನ್ ರನ್ನು ಮೈದಾನಕ್ಕೆ ಕರೆಸಿದ ಸ್ಮೃತಿ, ಹರ್ಮನ್ ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಸ್ಮೃತಿ ಆವತ್ತು ನಿಮಗಾಗಿ ಗೆಲ್ಲುತ್ತೇವೆ ಎಂದಿದ್ದೆವು ಆದರೆ ಗೆಲ್ಲಲಾಗಲಿಲ್ಲ ದೀದಿ. ಇದಕ್ಕೆ ಕ್ಷಮೆಯಿರಲಿ. ಈ ಬಾರಿ ಗೆದ್ದಿದ್ದೇವೆ, ಇದು ನಿಮಗಾಗಿ ಎಂದು ಟ್ರೋಫಿ ನೀಡಿ ಗೌರವಿಸಿದ್ದಾರೆ. ಈ ಕ್ಷಣದಲ್ಲಿ ಜೂಲಾನ್ ಕೂಡಾ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.