ಮುಂಬೈ: ವರ್ಮ, ಶರ್ಮ ಕಮಾಲ್.. ಭಾರತ ಮಹಿಳೆಯರು ಇಷ್ಟು ವರ್ಷಗಳಿಂದ ಕಾದಿದ್ದ ವಿಶ್ವಕಪ್ ಕೊನೆಗೂ ಒಲಿದು ಬಂದಿದೆ. ದಕ್ಷಿಣ ಆಫ್ರಿಕಾವನ್ನು 52 ರನ್ ಗಳಿಂದ ಸೋಲಿಸಿದ ಭಾರತೀಯ ವನಿತೆಯರು ವಿಶ್ವಕಪ್ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ7 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 45.3 ಓವರ್ ಗಳಲ್ಲಿ 246 ರನ್ ಗಳಿಸಲಷ್ಟೇ ಶಕ್ತವಾಯಿತು. ಆಫ್ರಿಕಾ ಪರ ನಾಯಕಿ ವಾಲ್ವಾರ್ಡ್ ಶತಕ ಸಿಡಿಸಿ ಭಾರತಕ್ಕೆ ಆತಂಕ ತಂದಿಟ್ಟರು. ಆದರೆ ಕೊನೆಗೂ 101 ರನ್ ಸಿಡಿಸಿದ್ದ ಅವರ ವಿಕೆಟ್ ದೀಪ್ತಿ ಶರ್ಮಾ ಪಡೆದಾಗ ಭಾರತ ಗೆಲುವಿಗೆ ಸನಿಹವಾಯಿತು.
ಈ ಗೆಲುವಿಗೆ ಮುಖ್ಯ ಕಾರಣ ದೀಪ್ತಿ ಶರ್ಮಾ, ಶಫಾಲಿ ವರ್ಮ ನಿರ್ಣಾಯಕ ಹಂತಗಳಲ್ಲಿ ವಿಕೆಟ್ ಪಡೆದಿದ್ದು. ಬ್ಯಾಟಿಂಗ್ ನಿಂದ ಅರ್ಧಶತಕ ಸಿಡಿಸಿ ಮಿಂಚಿದ್ದ ಶಫಾಲಿ ವರ್ಮ ಬೌಲಿಂಗ್ ನಲ್ಲೂ ಪ್ರಮುಖ 2 ವಿಕೆಟ್ ಕಿತ್ತು ತಂಡಕ್ಕೆ ಬ್ರೇಕ್ ನೀಡಿದರು. ಸೆಟ್ ಬ್ಯಾಟಿಗರನ್ನು ಪೆವಿಲಿಯನ್ ಗಟ್ಟುವ ಕೆಲಸವನ್ನು ದೀಪ್ತಿ ಶರ್ಮಾ ಮಾಡಿದರು. ಅವರು ಒಟ್ಟು 5 ವಿಕೆಟ್ ಕಬಳಿಸಿರು.
ಇನ್ನೊಂದೆಡೆ ಶ್ರೀ ಚರಣಿ, ರೇಣುಕಾ ಸಿಂಗ್ ಬಿಗುವಿನ ಬೌಲಿಂಗ್ ದಾಳಿ ಮೂಲಕ ಒತ್ತಡ ಹೆಚ್ಚಿಸಿದರು. ಈ ಮೂಲಕ ಭಾರತ ಮಹಿಳಾ ಕ್ರಿಕೆಟ್ ನ ಬಹುದಿನಗಳ ಕನಸು ನನಸಾಯಿತು. ಭಾರತ ಮಹಿಳಾ ಕ್ರಿಕೆಟ್ ಗೆ ಇದು ಹೊಸ ಹುಟ್ಟು ಎಂದರೂ ತಪ್ಪಾಗಲಾರದು. ಈ ಗೆಲುವು ಭಾರತ ಕ್ರಿಕೆಟ್ ಇತಿಹಾಸದಲ್ಲಿ ಎಂದೆಂದೂ ಸ್ಮರಣೀಯವಾಗಿ ಉಳಿಯಲಿದೆ.