ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ ಮಹಿಳೆಯರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಜೆಮಿಮಾ ರೊಡ್ರಿಗಸ್ ಬ್ಯಾಟಿಂಗ್ ಪ್ರದರ್ಶನ ನೋಡಿ ಕೆಲವರು ಆಕೆಯನ್ನು ತೀರಾ ಕೆಳಮಟ್ಟಕ್ಕಿಳಿದು ಟ್ರೋಲ್ ಮಾಡುತ್ತಿದ್ದಾರೆ.
ಸೆಮಿಫೈನಲ್ ನಲ್ಲಿ ಶತಕ ಸಿಡಿಸಿ ಆಸ್ಟ್ರೇಲಿಯಾದಂತಹ ದೈತ್ಯ ತಂಡವನ್ನು ಸೋಲಿಸಲು ಕಾರಣವಾಗಿದ್ದೇ ಜೆಮಿಮಾ. ಆಕೆಯ ಅಂತಹ ಒಂದು ಇನಿಂಗ್ಸ್ ಪುರುಷ ಕ್ರಿಕೆಟ್ ನಲ್ಲೂ ಕಾಣಲು ಅಪರೂಪ. ಕ್ರಿಕೆಟ್ ಇತಿಹಾಸ ಎಂದೆಂದೂ ನೆನಪಿನಲ್ಲುಳಿಯುವಂತಹ ಪ್ರದರ್ಶನ ನೀಡಿದ್ದರು. ಈ ಪಂದ್ಯದ ಬಳಿಕ ಜೆಮಿಮಾ ಬೈಬಲ್ ನಲ್ಲಿ ನೀವು ಅಚಲವಾಗಿ ನಿಂತರೆ ದೇವರು ನಿಮಗಾಗಿ ಹೋರಾಡುತ್ತಾನೆ ಎಂಬ ಮಾತಿದೆ ಎಂದು ತಮ್ಮ ಧರ್ಮಗ್ರಂಥದ ಉಲ್ಲೇಖ ಮಾಡಿದ್ದರು. ಅಲ್ಲದೆ ಜೀಸಸ್ ಗೆ ಧನ್ಯವಾದ ಸಲ್ಲಿಸಿದ್ದರು.
ಆದರೆ ಫೈನಲ್ ಪಂದ್ಯದಲ್ಲಿ ಜೆಮಿಮಾ ಬ್ಯಾಟಿಂಗ್ ಚೆನ್ನಾಗಿರಲಿಲ್ಲ. ಬರೋಬ್ಬರಿ 37 ಎಸೆತ ಎದುರಿಸಿ ಅವರು ಗಳಿಸಿದ್ದು ಕೇವಲ 24 ರನ್. ಹೀಗಾಗಿ ಅವರನ್ನು ನೆಟ್ಟಿಗರು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದರು. ಅದರಲ್ಲೂ ಕೆಲವರು ಇಂದು ಭಾನುವಾರ ಅಲ್ವಾ? ಅದಕ್ಕೆ ಜೀಸಸ್ ರಜೆ ಇದ್ದ ಅನಿಸುತ್ತೆ. ಅದಕ್ಕೇ ಈವತ್ತು ಜೆಮಿಮಾಗೆ ಸಹಾಯ ಮಾಡಲಿಲ್ಲ ಎಂದು ಅವಮಾನ ಮಾಡಿದ್ದಾರೆ.
ಭಾರತ ಫೈನಲ್ ಗೆ ತಲುಪಿದ್ದೇ ಜೆಮಿಮಾ ಸಾಹಸದಿಂದ ಎಂದು ಎಲ್ಲರೂ ಕೊಂಡಾಡಿದ್ದರು. ಆದರೆ ಫೈನಲ್ ನಲ್ಲಿ ಆಕೆ ಉತ್ತಮ ರನ್ ಗಳಿಸಲಿಲ್ಲ ಎಂಬ ಒಂದೇ ಕಾರಣಕ್ಕೆ ಆಕೆಯನ್ನು ಧರ್ಮದ ಆಧಾರದಲ್ಲಿ ಟ್ರೋಲ್ ಮಾಡಲಾಗಿದೆ.