ವಿಶಾಖಪಟ್ಟಣ: ಭಾರತದ ಬ್ಯಾಟಿಂಗ್ ತಾರೆ ಸ್ಮೃತಿ ಮಂದಾನಾ ಹಲವು ದಾಖಲೆ ಬರೆದಿದ್ದಾರೆ. ಮಹಿಳಾ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂದು ಅರ್ಧಶತಕ ದಾಖಲಿಸಿ ಹಲವು ಮೈಲಿಗಲ್ಲು ನಿರ್ಮಿಸಿದ್ದಾರೆ.
ಭಾರತ ತಂಡವು ಇಂದು ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದೆ. 48.5 ಓವರ್‌ಗಳಲ್ಲಿ 330 ರನ್ ಗಳಿಸಿ, ಆಸೀಸ್‌ಗೆ 331 ರನ್‌ಗಳ ಬೃಹತ್ ಗುರಿ ನೀಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಪರ ಸ್ಮೃತಿ ಮಂದಾನ ಹಲವು ವಿಶ್ವದಾಖಲೆಗಳನ್ನ ಬರೆದಿದ್ದಾರೆ.
ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದ ಮಂದಾನ 66 ಎಸೆತಗಳಲ್ಲಿ 80 ರನ್ (3 ಸಿಕ್ಸರ್, 9 ಬೌಂಡರಿ) ಚಚ್ಚಿದರು. ಈ ಮೂಲಕ ಹಲವು ವಿಶ್ವದಾಖಲೆಗಳನ್ನ ಮುಡಿಗೇರಿಸಿಕೊಂಡರು. ಕ್ಯಾಲೆಂಡರ್ ವರ್ಷದಲ್ಲಿ 1,000 ರನ್ ಪೂರೈಸಿದ ವಿಶ್ವದ ಮೊದಲ ಮಹಿಳಾ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಮಹಿಳಾ ಏಕದಿನ ಪಂದ್ಯಗಳಲ್ಲಿ ಸ್ಮೃತಿ ಮಂಧಾನ ಕೂಡ 5,000 ರನ್ ಪೂರೈಸಿದರು. ಈ ಸಾಧನೆ ಮಾಡಿದ 2ನೇ ಭಾರತೀಯ ಮತ್ತು ವಿಶ್ವದ 5ನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಸ್ಮೃತಿ ಕೇವಲ 112 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ಸಾಧಿಸಿದರು.