ಮುಂಬೈ: ಭಾರತ ತಂಡದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ಅವರು ರಿಯಾಲಿಟಿ ಶೋನಲ್ಲಿ ಮಾತನಾಡುತ್ತಾ ಚಾಹಲ್ ತನ್ನನ್ನು ಮದುವೆಯಾದ ಎರಡೇ ತಿಂಗಳಿಗೆ ಮೋಸ ಮಾಡಿದ್ದರು ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಚಾಹಲ್ ಖಡಕ್ ಉತ್ತರ ನೀಡಿದ್ದಾರೆ.
ಚಾಹಲ್ ಮತ್ತು ಪತ್ನಿ ಧನಶ್ರೀ ದಂಪತಿ ಮಾರ್ಚ್ 20, 2025 ರಂದು ವಿಚ್ಛೇದನ ಪಡೆದಿದ್ದರು. 2020ರಕ್ಕು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಈ ಜೋಡಿ ಸರಿಯಾಗಿ ಐದು ವರ್ಷವೂ ಜೊತೆಯಾಗಿ ಬಾಳಲಿಲ್ಲ. ಮದುವೆಯಾದ ಎರಡನೇ ವರ್ಷಕ್ಕೆ ಇವರಿಬ್ಬರ ನಡುವೆ ಬಿರುಕು ಮೂಡಿತ್ತು.
2022 ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹಲವಾರು ವರದಿಗಳು ಹೇಳಿದ್ದವು. ಅಲ್ಲದೆ ಇಷ್ಟರಲ್ಲೇ ವಿಚ್ಛೇದನ ಕೂಡ ಪಡೆಯಲಿದ್ದಾರೆ ಎಂದು ವರದಿಯಾಗುತ್ತಿತ್ತು. ಅದರಂತೆ ಅಂತಿಮವಾಗಿ ಇವರಿಬ್ಬರು 2025 ರಲ್ಲಿ ಅಧಿಕೃತವಾಗಿ ಬೇರೆ ಬೇರೆಯಾದರು. ಆದರೆ, ಅಷ್ಟು ದಿನಗಳವರೆಗೆ ಒಬ್ಬರಿಗೊಬ್ಬರು ಯಾವುದೇ ಆರೋಪಗಳನ್ನು ಮಾಡಿರಲಿಲ್ಲ.
ಇದೀಗ ಮೌನ ಮುರಿದ ಧನಶ್ರೀ, ಚಾಹಲ್ ಮದುವೆಯಾದ ಎರಡೇ ತಿಂಗಳಿಗೆ ಮೋಸ ಮಾಡಿದ್ದರು ಎಂದು ಆರೋಪಿಸಿದ್ದರು. ಈ ಆರೋಪಗಳಿಗೆ ಚಾಹಲ್ ಈಗ ಪ್ರತಿಕ್ರಿಯಿಸಿ, ಅವುಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ನಾನು ಆಟಗಾರ, ಮೋಸ ಮಾಡುವುದಿಲ್ಲ. ಆ ಅಧ್ಯಾಯ ಮುಗಿದಿದೆ, ನಾನು ಮುಂದೆ ಹೋಗಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.
ನಮ್ಮ ವೈವಾಹಿಕ ಜೀವನ 4.5 ವರ್ಷಗಳ ಕಾಲ ನಡೆದಿತ್ತು. ಹೀಗಿರುವಾಗ ಮದುವೆಯಾದ ಎರಡು ತಿಂಗಳಲ್ಲಿ ಮೋಸ ಹೋದರೆ ಅಷ್ಟು ವರ್ಷ ಯಾರು ಜೊತೆಯಲಿರುತ್ತಾರೆ. ನಾನು ಹಿಂದಿನದ್ದು ಮರೆತು ದೂರ ಸರಿದಿದ್ದೇನೆ ಎಂದು ನಾನು ಮೊದಲೇ ಹೇಳಿದ್ದೆ . ಆದರೆ ಕೆಲವರು ಇನ್ನೂ ಅಲ್ಲಿಯೇ ಸಿಲುಕಿಕೊಂಡಿದ್ದಾರೆ ಎಂದು ಧನಶ್ರೀ ಅವರಿಗೆ ಗೂಗ್ಲಿ ಎಸೆದಿದ್ದಾರೆ.