ಸಿಡ್ನಿ: ಗುಲ್ಮದ ಗಾಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಇದೀಗ ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದ ವೇಳೆ ಕ್ಯಾಚ್ ಹಿಡಿಯುವ ಯತ್ನದಲ್ಲಿ ಶ್ರೇಯಸ್ ಅಯ್ಯರ್ ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ಅವರು ಸ್ಪ್ಲೀನ್ ಅಥವಾ ಗುಲ್ಮದ ಗಾಯಕ್ಕೊಳಗಾಗಿದ್ದರು.
ಆಂತರಿಕ ರಕ್ತಸ್ರಾವದಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದ ಶ್ರೇಯಸ್ ಗೆ ಐಸಿಯುವಿನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಅವರು ಚೇತರಿಸಿಕೊಂಡಿದ್ದಾರೆ. ಸದ್ಯಕ್ಕೆ ಅವರು ಕೆಲವು ದಿನ ವೈದ್ಯಕೀಯ ಚಿಕಿತ್ಸೆಗಾಗಿ ಸಿಡ್ನಿಯಲ್ಲಿಯೇ ಇರಲಿದ್ದಾರೆ. ಸದ್ಯಕ್ಕೆ ಅವರು ಪ್ರಯಾಣ ಮಾಡುವ ಸ್ಥಿತಿಯಲ್ಲಿಲ್ಲ.
ಮೂಲಗಳ ಪ್ರಕಾರ ಇನ್ನು ಎರಡರಿಂದ ಮೂರು ತಿಂಗಳ ಕಾಲ ಶ್ರೇಯಸ್ ಕ್ರಿಕೆಟ್ ನಿಂದ ದೂರವುಳಿಯಲಿದ್ದಾರೆ. ಪ್ರಯಾಣಕ್ಕೆ ವೈದ್ಯರು ಅನುಮತಿ ನೀಡಿದ ಬಳಿಕ ಭಾರತಕ್ಕೆ ಮರಳಿ ಕೆಲವು ಸಮಯ ವಿಶ್ರಾಂತಿ ಪಡೆಯಬೇಕಾಗುತ್ತದೆ.