ಬೆಂಗಳೂರು: ಪುರುಷರ ಕ್ರಿಕೆಟ್ ಇರಲಿ, ಮಹಿಳೆಯರ ಕ್ರಿಕೆಟ್ ಇರಲಿ, ಆಸ್ಟ್ರೇಲಿಯಾ ಎಂಬ ದೈತ್ಯ ತಂಡವನ್ನು ಕಟ್ಟಿ ಹಾಕಲು ಭಾರತವೇ ಸೈ. ಭಾರತ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ಬಳಿಕ ಟೀಂ ಇಂಡಿಯಾ ಫ್ಯಾನ್ಸ್, ಆಸ್ಟ್ರೇಲಿಯಾ ಅವನತಿ ಶುರುವಾಗಿದ್ದು ಇಲ್ಲಿಂದಲೇ ಎಂದು ಹಳೆಯ ಫೋಟೋವೊಂದನ್ನು ವೈರಲ್ ಮಾಡುತ್ತಿದ್ದಾರೆ.
2023 ರ ಏಕದಿನ ವಿಶ್ವಕಪ್ ಗೆದ್ದಿದ್ದೇ ಕೊನೆ. ಅದಾದ ಬಳಿಕ ಆಸ್ಟ್ರೇಲಿಯಾ ತಂಡಕ್ಕೆ ಐಸಿಸಿ ಟ್ರೋಫಿ ಸಿಕ್ಕಿಲ್ಲ. ಅದರ ಬಳಿಕ ನಡೆದ ಟಿ20 ವಿಶ್ವಕಪ್, ಟೆಸ್ಟ್ ಚಾಂಪಿಯನ್ ಶಿಪ್, ಚಾಂಪಿಯನ್ಸ್ ಟ್ರೋಫಿ ಎಲ್ಲದರಲ್ಲೂ ಸೋಲು ಕಂಡಿದೆ. ಇದು ಪುರುಷರ ಕ್ರಿಕೆಟ್ ಕತೆಯಾದರೆ ಈಗ ಮಹಿಳೆಯರ ಕ್ರಿಕೆಟ್ ನಲ್ಲೂ ಏಕದಿನ ವಿಶ್ವಕಪ್ ನಲ್ಲಿ ಸೋಲಾಗಿದೆ.
ಅಸಲಿಗೆ ಆಸ್ಟ್ರೇಲಿಯಾ ಅವನತಿ ಆರಂಭವಾಗಿದ್ದು 2023 ರ ಏಕದಿನ ವಿಶ್ವಕಪ್ ಗೆದ್ದ ಬಳಿಕ ಅವರು ತೋರಿದ ದರ್ಪದ ಬಳಿಕ ಎನ್ನುತ್ತಿದ್ದಾರೆ ಫ್ಯಾನ್ಸ್. ಅಂದು ಭಾರತವನ್ನು ಭಾರತದ ನೆಲದಲ್ಲಿ ಸೋಲಿಸಿ ವಿಶ್ವಕಪ್ ಗೆದ್ದ ಬಳಿಕ ಆಸ್ಟ್ರೇಲಿಯಾ ತಂಡದ ಈಗಿನ ನಾಯಕ ಮಿಚೆಲ್ ಮಾರ್ಷ್ ಟ್ರೋಫಿ ಮೇಲೆ ಕಾಲು ಇಟ್ಟುಕೊಂಡು ಕೈಯಲ್ಲಿ ಶಾಂಪೈನ್ ಹಿಡಿದುಕೊಂಡು ದರ್ಪದಿಂದ ಕೂತಿರುವ ಫೋಟೋ ವೈರಲ್ ಆಗಿತ್ತು.
ಇದು ಎಷ್ಟೋ ಭಾರತೀಯ ಅಭಿಮಾನಿಗಳ ನೋವು ಹೆಚ್ಚಿಸಿತ್ತು. ಒಂದು ವೇಳೆ ಭಾರತವೇನಾದರೂ ಟ್ರೋಫಿ ಗೆದ್ದಿದ್ದರೆ ಆ ಟ್ರೋಫಿಯನ್ನು ತಲೆ ಮೇಲೆ ಹೊತ್ತು ಮೆರೆಸುತ್ತಿದ್ದರು. ಆದರೆ ಆಸ್ಟ್ರೇಲಿಯನ್ನರಿಗೆ ಎಷ್ಟು ದರ್ಪ ಎಂದರೆ ಟ್ರೋಫಿಯನ್ನು ಕಾಲ ಕಸದಂತೆ ಕಂಡಿದ್ದರು.
ಇದಾದ ಬಳಿಕವೇ ಆಸ್ಟ್ರೇಲಿಯನ್ನರ ಅವನತಿ ಆರಂಭವಾಗಿದೆ ಎನ್ನುತ್ತಿದ್ದಾರೆ ಫ್ಯಾನ್ಸ್. ಅದಾದ ಬಳಿಕ ಆಸ್ಟ್ರೇಲಿಯಾಗೆ ಐಸಿಸಿ ಟ್ರೋಫಿ ಸಿಕ್ಕಿಲ್ಲ. ಪುರುಷರ ಕ್ರಿಕೆಟ್ ಗೆ ಬಂದರೆ ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಭಾರತದ ಪಾಲಾಗಿದೆ. ಟೆಸ್ಟ್ ಚಾಂಪಿಯನ್ಸ್ ಶಿಪ್ ಫೈನಲ್ ಗೆ ಬಂದರೂ ಆಫ್ರಿಕಾ ಎದುರು ಸೋತಿದೆ. ಇದೀಗ ಮಹಿಳೆಯರ ಏಕದಿನ ವಿಶ್ವಕಪ್ ನಲ್ಲೂ ಸೆಮಿಫೈನಲ್ ನಲ್ಲೇ ನಿರ್ಗಮಿಸಿದೆ. ಹೀಗಾಗಿ ಅಂದು ಮಾಡಿದ ಆ ದುರಂಹಕಾರದ ವರ್ತನೆಯಿಂದಲೇ ಆಸ್ಟ್ರೇಲಿಯಾ ಅಧಃಪತನ ಶುರುವಾಗಿದೆ ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ.