ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ವಿಶ್ವಕಪ್ ಸೆಮಿಫೈನಲ್ ನಲ್ಲಿ ಶತಕ ಸಿಡಿಸಿ ಗೆಲುವು ಕೊಡಿಸಿದರು ಎಂದು ಇಂದು ದೇಶವೇ ಕೊಂಡಾಡುತ್ತಿರುವ ಜೆಮಿಮಾ ರೊಡ್ರಿಗಸ್ ಒಮ್ಮೆ ಮತಾಂತರ ವಿವಾದಕ್ಕೆ ಸಿಲುಕಿ ಅವಮಾನ ಅನುಭವಿಸಿದ್ದರು. 
									
			
			 
 			
 
 			
					
			        							
								
																	ಜಿಮ್ಖಾನಾ ಕ್ಲಬ್ ನಲ್ಲಿ ಅವರ ತಂದೆ ಹಾಲ್ ಬುಕ್ ಮಾಡಿ ಕ್ರಿಶ್ಚಿಯಾನಿಟಿ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜೆಮಿಮಾ ಕೂಡಾ ಇದ್ದ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
									
										
								
																	ಇದರ ಬೆನ್ನಲ್ಲೇ ಜಿಮ್ಖಾನ್ ಕ್ರಿಕೆಟ್ ಕ್ಲಬ್ ಅವರ ಸದಸ್ಯತ್ವ ರದ್ದುಗೊಳಿಸಿ ಹೊರಹಾಕಿತ್ತು. ಆದರೆ ನಾವು ಮತಾಂತರ ಮಾಡುತ್ತಿರಲಿಲ್ಲ, ಕೇವಲ ಕಾರ್ಯಕ್ರಮಕ್ಕೆ ಬುಕಿಂಗ್ ಮಾಡಿದ್ದೆವಷ್ಟೇ ಎಂದು ಸ್ಪಷ್ಟನೆ ನೀಡಿದ್ದರು. ಹಾಗಿದ್ದರೂ ತಂದೆ-ಮಗಳು ಇಬ್ಬರನ್ನೂ ಹೊರಹಾಕಲಾಗಿತ್ತು.
									
											
							                     
							
							
			        							
								
																	ಇಷ್ಟೆಲ್ಲಾ ಅವಮಾನದ ಬಳಿಕವೂ ಜೆಮಿಮಾ ಕ್ರಿಕೆಟ್ ನಲ್ಲಿ ಮುಂದುವರಿದಿದ್ದರು. ಆದರೆ ತೀರಾ ಇತ್ತೀಚೆಗೆ ಅವರು ಆತಂಕದ ಸಮಸ್ಯೆ(anxiety issue)ಯಿಂದ ಬಳಲುತ್ತಿದ್ದರಂತೆ. ಈ ವಿಶ್ವಕಪ್ ನಲ್ಲೂ ಅವರು ಅದೇ ಸಮಸ್ಯೆಯಲ್ಲಿದ್ದರು. ಅವರಿಗೆ ಆತ್ಮವಿಶ್ವಾಸದ ಕೊರತೆಯಿತ್ತು, ಪ್ರತೀ ಪಂದ್ಯಕ್ಕೆ ಮೊದಲು ಅಳುತ್ತಿದ್ದರಂತೆ. ಇದನ್ನೆಲ್ಲಾ ಅವರೇ ಹೇಳಿಕೊಂಡಿದ್ದಾರೆ. ನಾನು ನನ್ನ ಎಲ್ಲಾ ದುಃಖಗಳನ್ನು ಅರುಂದತಿ ಎದುರು ಹೇಳಿಕೊಳ್ಳುತ್ತಿದ್ದೆ. ಪ್ರತಿದಿನ ಅವಳ ಮುಂದೆ ಅಳುತ್ತಿದ್ದೆ. ಸ್ಮೃತಿ ಮಂಧಾನಾಗೂ ನನ್ನ ಕಷ್ಟ ಗೊತ್ತಿತ್ತು. ಹೀಗಾಗಿ ನನ್ನ ಅಭ್ಯಾಸದ ಸಮಯದಲ್ಲೂ ಅವಳು ನನ್ನ ಜೊತೆಗೇ ನಿಂತಿರುತ್ತಿದ್ದಳು. ರಾಧಾ, ಹರ್ಮನ್ ಹೀಗೆ ಪ್ರತಿಯೊಬ್ಬರೂ ನನಗೆ ಬೆಂಬಲವಾಗಿ ನಿಂತರು. ಅವರೆಲ್ಲರಿಗೂ ನಾನು ಧನ್ಯವಾದ ಹೇಳಬೇಕು. ಬೈಬಲ್ ನಲ್ಲಿ ಒಂದು ಮಾತಿದೆ, ನೀವು ಅಚಲವಾಗಿ ನಿಂತರೆ ನಿಮಗಾಗಿ ಆ ದೇವರೇ ಹೋರಾಡುತ್ತಾರೆ ಎಂದು. ಅದು ಇಂದು ನಿಜವಾಗಿದೆ ಎಂದು ನಿನ್ನೆಯ ಪಂದ್ಯದ ಬಳಿಕ ಜೆಮಿಮಾ ಭಾವುಕರಾಗಿ ಹೇಳಿದ್ದಾರೆ.