ಮುಂಬೈ: ಮಹಿಳಾ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯನ್ನರ ಆಧಿಪತ್ಯ ಕೊನೆಗೊಳಿಸಿದ ಕ್ಷಣವದು. ಭಾರತ ಮಹಿಳಾ ಕ್ರಿಕೆಟ್ ತಂಡ ಮೂರನೇ ಬಾರಿಗೆ ವಿಶ್ವಕಪ್ ಫೈನಲ್ ಗೆ ತಲುಪಿದ ರೋಚಕ ಕ್ಷಣವದು. ಈ ಕ್ಷಣದ ಈ ಒಂದು ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದ್ದು ಇದನ್ನು ಎಷ್ಟು ಸಲ ನೋಡಿದ್ರೂ ಹೆಮ್ಮೆಯಿಂದ ಕಣ್ತುಂಬಿ ಬರುತ್ತದೆ. 
									
			
			 
 			
 
 			
					
			        							
								
																	ಆಸ್ಟ್ರೇಲಿಯಾ 338 ರನ್ ಗಳ ಮೊತ್ತ ಕೂಡಿ ಹಾಕಿದಾಗ ಆಸ್ಟ್ರೇಲಿಯನ್ನರ ವಿರುದ್ಧ ನಮ್ಮ ಹುಡುಗಿಯರಿಗೆ ಇಷ್ಟು ರನ್ ಚೇಸ್ ಮಾಡಲು ಆಗಲ್ಲ ಬಿಡಿ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಜೆಮಿಮಾ ರೊಡ್ರಿಗಸ್ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದರು.
									
										
								
																	ಹರ್ಮನ್ ಗೆ ಯಾವತ್ತೂ ಆಸ್ಟ್ರೇಲಿಯಾ ಎಂದರೆ ಮೈಮೇಲೆ ಆವೇಶ ಬಂದು ಬಿಡುತ್ತದೆ ಎನಿಸುತ್ತದೆ. ಈ ಹಿಂದೆಯೂ ಅವರು ಹಲವು ಬಾರಿ ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಆಟ ಪ್ರದರ್ಶಿಸಿದ್ದಾರೆ. ಹೀಗಾಗಿ ಆಸ್ಟ್ರೇಲಿಯನ್ನರು ಹರ್ಮನ್ ಗೆ ಕೊಂಚ ಭಯ ಪಡುತ್ತಾರೆ.
									
											
									
			        							
								
																	ಇದರ ಜೊತೆಗೆ ನಿನ್ನೆ ಜೆಮಿಮಾ ಔಟ್ ಆಫ್ ಸಿಲಬಸ್ ಆಗಿ ಬಂದರು. ಸ್ಮೃತಿ, ಹರ್ಮನ್, ರಿಚಾರಂತೆ ಬಲಾಢ್ಯ ಬ್ಯಾಟಿಗಳಾಗಿಲ್ಲದೇ ಇದ್ದರೂ ಟೈಮಿಂಗ್ ನಿಂದಲೇ ರನ್ ಗಳಿಸುವ ಚಾಣಕ್ಷ್ಯೆ ಜೆಮಿಮಾ. ನಿನ್ನೆ ತಮ್ಮ ಜೀವನಶ್ರೇಷ್ಠ ಪ್ರದರ್ಶನ ನೀಡಿದರು. ಕೊನೆಯವರೆಗೂ ಶತಕ ಸಿಡಿಸಿ ಅಜೇಯರಾಗುಳಿದು ಭಾರತ ತಂಡಕ್ಕೆ ಗೆಲುವು ಕೊಡಿಸಿದರು. ಇದು ಕೇವಲ ಸೆಮಿಫೈನಲ್ ಗೆಲುವಲ್ಲ. ತಮ್ಮನ್ನು ಯಾರೂ ಸೋಲಿಸುವವರೇ ಇಲ್ಲ ಎನ್ನುವ ಆಸ್ಟ್ರೇಲಿಯನ್ನರ ಗರ್ವಕ್ಕೆ ಬಿದ್ದ ಪೆಟ್ಟು. ಮಹಿಳಾ  ಏಕದಿನ ಇತಿಹಾಸದಲ್ಲೇ ಗರಿಷ್ಠ ರನ್ ಚೇಸ್. 
									
			                     
							
							
			        							
								
																	ಈ ದಾಖಲೆಯ ಗೆಲುವಿನ ರನ್ ಬರುತ್ತಿದ್ದಂತೇ ಡಗೌಟ್ ನಲ್ಲಿದ್ದ ಆಟಗಾರ್ತಿಯರು ಮೈದಾನದತ್ತ ಮುನ್ನುಗ್ಗಿದ್ದರು. ಕ್ರೀಸ್ ನಲ್ಲಿದ್ದ ಜೆಮಿಮಾ ಭಾವನೆ ತಡೆಯಲಾಗದೇ ಗಳ ಗಳನೇ ಅತ್ತು ಕುಸಿದು ಕೂತಿದ್ದರು. ಬಳಿಕ ಪ್ರತಿಯೊಬ್ಬ ಆಟಗಾರ್ತಿಯರನ್ನೂ ತಬ್ಬಿ ಅತ್ತೇ ಬಿಟ್ಟರು. ಪ್ರೇಕ್ಷಕರತ್ತ ತಿರುಗಿ ಧನ್ಯವಾದ ಸಲ್ಲಿಸಿದರು. ಈ ಭಾವುಕ ಕ್ಷಣದ ವಿಡಿಯೋ ಇಲ್ಲಿದೆ ನೋಡಿ.