ಮುಂಬೈ: ನೀವಿರುವಾಗ ನಾನು ಮಧ್ಯದಲ್ಲಿ ಕೂರಬೇಕಾ ಎಂದು ಹಿರಿಯ ಕ್ರಿಕೆಟಿಗರನ್ನು ವೇದಿಕೆಯ ಮಧ್ಯದಲ್ಲಿ ಕೂರಿಸಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವರ್ತನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹದ್ದೊಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮುಂಬೈ ಕ್ರಿಕೆಟ್ ಅಸೋಸಿಯೇಷನ್ 50 ನೇ ವರ್ಷದ ವಾರ್ಷಿಕೋತ್ಸವ ನಿಮಿತ್ತ ನಿನ್ನೆ ವಾಂಖೆಡೆ ಮೈದಾನದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕ್ರಿಕೆಟ್ ದಿಗ್ಗಜರ ಜೊತೆಗೆ ರೋಹಿತ್ ಕೂಡಾ ಭಾಗಿಯಾಗಿದ್ದರು.
ವೇದಿಕೆಯಲ್ಲಿ ಅದಾಗಲೇ ಸಚಿನ್ ತೆಂಡುಲ್ಕರ್, ರವಿಶಾಸ್ತ್ರಿ, ಸುನಿಲ್ ಗವಾಸ್ಕರ್ ಸೇರಿದಂತೆ ಹಲವು ದಿಗ್ಗಜರು ಕೂತಿದ್ದರು. ಈ ವೇಳೆ ರೋಹಿತ್ ಶರ್ಮಾರನ್ನೂ ವೇದಿಕೆಗೆ ಕರೆಯಲಾಯಿತು. ವೇದಿಕೆಯ ಮಧ್ಯ ಭಾಗದಲ್ಲಿ ಅವರಿಗೆ ಆಸನ ಮೀಸಲಾಗಿತ್ತು.
ಅವರಿಗಿಂತ ಮೊದಲೇ ಅಲ್ಲಿದ್ದ ಸುನಿಲ್ ಗವಾಸ್ಕರ್, ರವಿಶಾಸ್ತ್ರಿಗೆ ಬದಿಯಲ್ಲಿ ಆಸನ ಮೀಸಲಾಗಿತ್ತು. ರವಿಶಾಸ್ತ್ರಿ ಒಂದು ತುದಿಯಲ್ಲಿ ಕೂತಿದ್ದು ನೋಡಿ ರೋಹಿತ್ ಶರ್ಮಾ ಅವರನ್ನು ಅಲ್ಲಿಂದ ಎಬ್ಬಿಸಿ ನೀವು ಮೊದಲು ಮಧ್ಯದಲ್ಲಿ ಕೂತುಕೊಳ್ಳಿ ಎಂದು ಅವರನ್ನು ಮಧ್ಯದಲ್ಲಿ ಕೂರಿಸಿ ಗೌರವಿಸಿದರು. ಅದೇ ರೀತಿ ಚಾಂಪಿಯನ್ಸ್ ಟ್ರೋಫಿ ಪಕ್ಕ ನಿಂತು ಫೋಟೋ ಶೂಟ್ ಮಾಡಿಸಿಕೊಳ್ಳುವಾಗಲೂ ತಮ್ಮನ್ನು ಮಧ್ಯ ನಿಲ್ಲಲು ಕರೆದರೂ ಸುನಿಲ್ ಗವಾಸ್ಕರ್ ಗೆ ಮಧ್ಯದಲ್ಲಿ ನಿಲ್ಲುವಂತೆ ಹೇಳಿ ತಾವು ಮಾತ್ರ ಬದಿಗೆ ನಿಂತರು. ಅವರ ಈ ವರ್ತನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.