ಬೆಂಗಳೂರು: ಖೋಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ತಂಡದಲ್ಲಿ ಮೈಸೂರು ಮೂಲದ ಅಪ್ಪಟ ಕನ್ನಡತಿ ಬಿ ಚೈತ್ರಾ ಕೂಡಾ ಸೇರಿದ್ದಾರೆ. ಅವರ ಹಿನ್ನಲೆ ಎಲ್ಲರಿಗೂ ಸ್ಪೂರ್ತಿ.
ನವದೆಹಲಿಯಲ್ಲಿ ನಡೆದಿದ್ದ ಖೋ ಖೋ ವಿಶ್ವಕಪ್ 2025 ರಲ್ಲಿ ಭಾರತ ಮಹಿಳಾ ತಂಡ ನೇಪಾಳ ಮಹಿಳೆಯರನ್ನು ಸದೆಬಡಿದು ಅಮೋಘ ಸಾಧನೆ ಮಾಡಿತ್ತು. ಈ ತಂಡದಲ್ಲಿ ಅಪ್ಪಟ ಕನ್ನಡ ಪ್ರತಿಭೆ ಬಿ ಚೈತ್ರಾ ಕೂಡಾ ಇದ್ದರು.
ಚೈತ್ರಾ ಮೂಲತಃ ಮೈಸೂರಿನವರು. ಗ್ರಾಮೀಣ ಪ್ರತಿಭೆ. ತೀರಾ ಕಡುಬಡತನದಿಂದ ಮೇಲೆ ಬಂದವರು. ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಏಕೈಕ ದಕ್ಷಿಣ ಭಾರತದ ಆಟಗಾರ್ತಿ. ಆಕೆಯ ಸಾಧನೆ ಕನ್ನಡಿಗರೇ ಹೆಮ್ಮೆ ಪಡುವಂತೆ ಮಾಡಿದೆ.
ಚೈತ್ರಾ ಟಿ ನರಸೀಪುರ ತಾಲೂಕಿನ ಕರುಬೂರು ಗ್ರಾಮದವರು. ತಂದೆ ಬಸವಣ್ಣ ರೈತರು. ಮೊದಲು ತನ್ನೂರಿನಲ್ಲೇ ಖೋ ಖೋ ಆಡಿಕೊಂಡಿದ್ದ ಚೈತ್ರಾ ಬಡತನದಲ್ಲೇ ಬೆಳೆದ ಹುಡುಗಿ. ಮೊದಲು ಸರ್ಕಾರೀ ಶಾಲೆಯಲ್ಲಿ ಓದುತ್ತಿದ್ದ ಆಕೆಗೆ ಕ್ರೀಡೆಗೆ ಯಾವುದೇ ಪ್ರೋತ್ಸಾಹ ಸಿಗುತ್ತಿರಲಿಲ್ಲ. ಹೀಗಾಗಿ ಕುಟುಂಬದ ಸ್ನೇಹಿತರ ಸಲಹೆ ಮೇರೆಗೆ ಕಷ್ಟವಾದರೂ ಪೋಷಕರು ಖಾಸಗಿ ಶಾಲೆಗೆ ಸೇರಿಸಿದರು.
ಇಲ್ಲಿ ಶಿಕ್ಷಕರು, ತನ್ನ ಅಣ್ಣನ ಮಾರ್ಗದರ್ಶನದಿಂದ ಚೈತ್ರಾ ಖೋ ಖೋ ಆಟದಲ್ಲಿ ಮುಂದೆ ಬಂದಿದ್ದಾರೆ. ಶಿಕ್ಷಕ ಮಂಜುನಾಥ್ ಆಕೆಯ ಪ್ರತಿಭೆ ಗಮನಿಸಿ ಗುರುವಾಗಿ ಕೋಚಿಂಗ್ ನೀಡಿದರು. ಪರಿಣಾಮ ಇಂದು ಆಕೆ ವಿಶ್ವಚಾಂಪಿಯನ್ ತಂಡದ ಸದಸ್ಯೆಯಾಗಿದ್ದಾಳೆ.