ಮೆಲ್ಬೊರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ತಂಡಕ್ಕೆ ಅಗತ್ಯವಿದ್ದಾಗ ಬೇಜವಾಬ್ಧಾರಿಯುತ ಶಾಟ್ ಆಡಿ ಔಟಾದ ರಿಷಭ್ ಪಂತ್ ರನ್ನು ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಇನ್ನಿಲ್ಲದಂತೆ ಲೈವ್ ನಲ್ಲೇ ಬೈದಿದ್ದಾರೆ.
ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್ ನಲ್ಲಿ ತಂಡದ ಆಪತ್ ಬಾಂಧವ ಎಂದೇ ಪರಿಗಣಿಸಲಾಗುತ್ತಿದೆ. ಈ ಪಂದ್ಯದಲ್ಲೂ ಅವರು ಉತ್ತಮ ಲಯದಲ್ಲೇ ಇದ್ದರು. ತಂಡಕ್ಕೂ ಅವರಿಂದ ದೊಡ್ಡ ಇನಿಂಗ್ಸ್ ನ ಅಗತ್ಯವಿತ್ತು. ಯಾಕೆಂದರೆ ಟೀಂ ಇಂಡಿಯಾ ಆಸೀಸ್ ನ 474 ರನ್ ಗಳ ಮೊತ್ತ ಬೆನ್ನತ್ತುವಾಗ ಆಗಲೇ 160 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಸ್ಥಿತಿಯಲ್ಲಿ ರಿಷಭ್ ತಂಡಕ್ಕೆ ಆಧಾರವಾಗಬೇಕಿತ್ತು.
ಆದರೆ ಇಂದು ತಂಡ ಸಂಕಷ್ಟದಲ್ಲಿದ್ದಾಗಲೂ ಸಿಕ್ಸರ್ ಹೊಡೆಯುವ ಭಂಡ ಧೈರ್ಯ ಪ್ರದರ್ಶಿಸಿದ್ದಾರೆ. ಅದೂ ಎರಡು ಫೀಲ್ಡರ್ ಗಳಿದ್ದರೂ ಅದೇ ಜಾಗಕ್ಕೆ ಎತ್ತಿ ಹೊಡೆದು ವಿಕೆಟ್ ಕಳೆದುಕೊಂಡಿದ್ದಾರೆ. ರಿಷಭ್ ಈ ಶಾಟ್ ಹೊಡೆಯುತ್ತಿದ್ದಂತೇ ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಕೆಂಡಾಮಂಡಲರಾಗಿದ್ದಾರೆ.
ಲೈವ್ ನಲ್ಲೇ ರಿಷಭ್ ರನ್ನು ಸ್ಟುಪಿಡ್ ಎಂದು ಬೈದ ಸುನಿಲ್ ಗವಾಸ್ಕರ್ ಹಿಂದಿನ ಎಸೆತದಲ್ಲಿ ಅದೇ ಶಾಟ್ ಹೊಡೆಯಲು ಹೋಗಿ ಮಿಸ್ ಆಗಿದ್ದರು. ತಂಡ ಇಷ್ಟು ಸಂಕಷ್ಟದಲ್ಲಿದೆ. ಹಾಗಿರುವಾಗ ಸ್ವಲ್ಪವಾದರೂ ಜವಾಬ್ಧಾರಿಯುತವಾಗಿ ಆಡಬೇಡವೇ? ಇಬ್ಬರು ಫೀಲ್ಡರ್ ಗಳಿದ್ದಾರೆ ಎಂದು ಗೊತ್ತಿದ್ದೂ ಅದೇ ಶಾಟ್ ಹೊಡೆಯುವುದೇ? ಆತ ಭಾರತದ ಪೆವಿಲಿಯನ್ ಗಲ್ಲ, ಆಸ್ಟ್ರೇಲಿಯಾದ ಪೆವಿಲಿಯನ್ ಗೆ ಹೋಗಲಿ ಎಂದು ಗವಾಸ್ಕರ್ ಕೆಂಡ ಕಾರಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ.