ಸಿಡ್ನಿ: ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಭಾನುವಾರ ಆಸ್ಟ್ರೇಲಿಯಾದಲ್ಲಿ ಆಡಿದ ತಮ್ಮ ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಮೂರನೇ ಭಾರತೀಯ ಬ್ಯಾಟರ್ ಎಂಬ ದಾಖಲೆಗೆ ಪಾತ್ರವಾದರು.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಇನ್ನಿಂಗ್ಸ್‌ನಲ್ಲಿ ಎಂಟು ಎಸೆತಗಳಲ್ಲಿ ಡಕ್ ಗಳಿಸಿದ್ದ ಜೈಸ್ವಾಲ್, ಎರಡನೇ ಇನ್ನಿಂಗ್ಸ್‌ನ 62 ನೇ ಓವರ್‌ನ ಐದನೇ ಎಸೆತದಲ್ಲಿ ಸಿಕ್ಸರ್‌ನೊಂದಿಗೆ 100 ರನ್‌ಗಳ ಗಡಿ ದಾಟಿದರು. ಈ ಮೂಲಕ ಭಾರತ ತಂಡವು ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಿಡಿತ ಸಾಧಿಸಿತು.
ಮೋಟಗಾನಹಳ್ಳಿ ಜೈಸಿಂಹ ಅವರು ಆಸ್ಟ್ರೇಲಿಯಾದಲ್ಲಿ ತಮ್ಮ ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಅವರು 1968ರಲ್ಲಿ ಬ್ರಿಸ್ಬೇನ್‌ನಲ್ಲಿ ಜನವರಿ 19 ರಿಂದ 24 ರವರೆಗೆ ಆಡಿದ ಭಾರತ-ಆಸ್ಟ್ರೇಲಿಯಾ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆಯನ್ನು ಮಾಡಿದ್ದರು. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಜೈಸಿಂಹ 101 ರನ್ ಗಳಿಸಿದ್ದರು.
ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಕೂಡ ಆಸ್ಟ್ರೇಲಿಯಾದಲ್ಲಿ ಆಡಿದ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಅವರು 1977ರಲ್ಲಿ ಆಡಿದ ಬ್ರಿಸ್ಬೇನ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 113 ರನ್ ಗಳಿಸಿದ್ದರು.
ಅಲ್ಲದೆ 23 ವರ್ಷ ವಯಸ್ಸಿಗೂ ಮುನ್ನ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಭಾರತೀಯ ಬ್ಯಾಟರ್ಗಳ ಪಟ್ಟಿಯಲ್ಲಿ 4 ಶತಕಗಳೊಂದಿಗೆ 5ನೇ ಸ್ಥಾನ ಪಡೆದ್ದಿದ್ದಾರೆ. 23 ವರ್ಷ ವಯಸ್ಸಿಗೂ ಮೊದಲು 8 ಶತಕ ಸಿಡಿಸಿದ್ದ ಸಚಿನ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ರವಿಶಾಸ್ತ್ರಿ (5), ಸುನಿಲ್ ಗವಾಸ್ಕರ್ (4), ವಿನೋದ್ ಕಾಂಬ್ಳಿ (4) ನಂತರದ ಸ್ಥಾನದಲ್ಲಿದ್ದಾರೆ.
2024ರ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಟೀಂ ಇಂಡಿಯಾ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಜೈಸ್ವಾಲ್ ಪಾತ್ರರಾಗಿದ್ದಾರೆ. ಆರಂಭಿಕ ಆಟಗಾರ ಜೈಸ್ವಾಲ್ ಈ ವರ್ಷ ಒಟ್ಟು ಮೂರು ಟೆಸ್ಟ್ ಶತಕಗಳನ್ನು ಸಿಡಿಸಿದ್ದಾರೆ.