ಮುಂಬೈ: ಟೀಂ ಇಂಡಿಯಾದಲ್ಲಿ ಆಟಗಾರನಾಗಿ ಮಾತ್ರವಲ್ಲ ಕೋಚ್ ಆಗಿಯೂ ರಾಹುಲ್ ದ್ರಾವಿಡ್ ವಿಶೇಷ ಸ್ಥಾನ ಪಡೆದಿದ್ದಾರೆ. ಕೋಚ್ ಆಗಿ ಬಂದಾಗ ದ್ರಾವಿಡ್ ಹೇಳಿದ್ದ ಈ ಮಾತು ಗಂಭೀರ್ ಸೇರಿದಂತೆ ಮುಂದಿನ ಎಲ್ಲಾ ಕೋಚ್ ಗಳಿಗೂ ಪಾಠವಾಗಬೇಕು.
ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕಂಡ ಶ್ರೇಷ್ಠ ಆಟಗಾರ, ಅದೇ ರೀತಿ ಶ್ರೇಷ್ಠ ಕೋಚ್. ಅವರ ಶ್ರೇಷ್ಠತೆಗೆ ಅವರು ಕೋಚ್ ಆಗಿದ್ದಾಗ ಭಾರತ ಎರಡು ಬಾರಿ ಐಸಿಸಿ ಫೈನಲ್ ಗೆ ಹೋಗಿದ್ದೇ ಸಾಕ್ಷಿ. ಅದರ ಜೊತೆಗೆ ರೋಹಿತ್ ಶರ್ಮಾ ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ ಗೆಲ್ಲಲೂ ದ್ರಾವಿಡ್ ಹಾಕಿಕೊಟ್ಟಿದ್ದ ಅಡಿಪಾಯವೇ ಕಾರಣ ಎಂದಿದ್ದರು.
ರಾಹುಲ್ ದ್ರಾವಿಡ್ ಕೋಚ್ ಆಗಿ ತಂಡಕ್ಕೆ ಬಂದಾಗ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಯುವ ಆಟಗಾರರನ್ನು ತರಬೇತು ಮಾಡಿ ರಾಷ್ಟ್ರೀಯ ತಂಡಕ್ಕೆ ಕಳುಹಿಸುತ್ತಿದ್ದ ದ್ರಾವಿಡ್ ಟೀಂ ಇಂಡಿಯಾಕ್ಕೆ ಮಹತ್ವದ ಟೂರ್ನಿಗಳನ್ನೇ ಗೆಲ್ಲಿಸುತ್ತಾರೆ ಎಂಬುದು ನಿರೀಕ್ಷೆಯಾಗಿತ್ತು.
ದ್ರಾವಿಡ್ ಕೋಚ್ ಆಗಿ ತಂಡಕ್ಕೆ ಬಂದಾಗ ನಾಯಕ ರೋಹಿತ್ ಶರ್ಮಾ ಬಳಿ ಹೇಳಿದ್ದು ಒಂದೇ ಮಾತು. ನಾನು ನಿಮಗೆ ಸಹಾಯ ಮಾಡಲು ಬಂದಿದ್ದೇನೆ, ನಿಮಗೆ ಸವಾಲು ಹಾಕುತ್ತೇನೆ, ಪ್ರಶ್ನೆಗಳನ್ನು ಕೇಳುತ್ತೇನೆ. ಆದರೆ ಈ ತಂಡ ನಿಮ್ಮದು. ನಿಮಗೆ ಹೇಗೆ ಬೇಕು ಅನಿಸುತ್ತದೋ ಹಾಗೆ ಮುನ್ನಡೆಸಿ ಎಂದಿದ್ದರಂತೆ.
ಆದರೆ ಈಗ ಬಂದಿರುವ ಕೋಚ್ ಗೌತಮ್ ಗಂಭೀರ್ ಎಲ್ಲವೂ ತಾವು ಹೇಳಿದಂತೆ ನಡೆಯಬೇಕು ಎನ್ನುವ ಧಾವಂತದಲ್ಲಿದ್ದಂತೆ ಕಾಣುತ್ತದೆ. ಅದರ ಬದಲು ನಿಮ್ಮದೇ ತಂಡ ಎಂದು ನಾಯಕನಿಗೆ ಎಲ್ಲವನ್ನೂ ಬಿಟ್ಟುಕೊಡುವ ಕೋಚ್ ಗಳೇ ಟೀಂ ಇಂಡಿಯಾದಲ್ಲಿ ಹೆಚ್ಚು ಯಶಸ್ವಿಯಾಗಿದ್ದಾರೆ.