ಕೋಲ್ಕತ್ತಾ: ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲಬಹುದಾಗಿದ್ದ ಮೊದಲ ಟೆಸ್ಟ್ ಪಂದ್ಯವನ್ನು ಸೋತ ಬಳಿಕ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ ಕಟ್ಟಿದ್ದ ತಂಡವನ್ನು ಗಂಭೀರ್ ಕೆಡವಿದರು ಎಂದು ಕಿಡಿ ಕಾರಿದ್ದಾರೆ.
ಗೌತಮ್ ಗಂಭೀರ್ ಕೋಚ್ ಆದ ಬಳಿಕ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ನಲ್ಲಿ ತೀರಾ ನಿರಾಶಾದಾಯಕ ಪ್ರದರ್ಶನ ನೀಡುತ್ತಿದೆ. ಅದರಲ್ಲೂ ತವರಿನಲ್ಲೇ ಭಾರತ ಟೆಸ್ಟ್ ಪಂದ್ಯದಲ್ಲಿ ಸೋಲುವುದು ತೀರಾ ಅಪರೂಪವಾಗಿತ್ತು. ಆದರೆ ಗಂಭೀರ್ ಕೋಚ್ ಆದ ಬಳಿಕ ತವರಿನ ಪಂದ್ಯಗಳಲ್ಲೇ ಸೋಲುವುದು ಸಾಮಾನ್ಯವಾಗಿದೆ.
ಹೀಗಾಗಿ ಗಂಭೀರ್ ಟಿ20 ಕ್ರಿಕೆಟ್ ಗಷ್ಟೇ ಉತ್ತಮ ಕೋಚ್. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಗೆ ಅವರು ಉತ್ತಮ ಕೋಚ್ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಗಂಭೀರ್ ಕೊಚ್ ಆದ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಸೋತಿದೆ. ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋತಿದೆ. ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿ ಸೋತಿದೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಸೋತು ಸರಣಿ ಗೆಲ್ಲುವ ಅವಕಾಶ ಕಳೆದುಕೊಂಡಿದೆ.
ಹೀಗೇ ಮುಂದುವರಿದರೆ ಈ ಬಾರಿಯೂ ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪುವುದು ಅನುಮಾನ. ಈ ಸಂದರ್ಭದಲ್ಲಿ ಅಭಿಮಾನಿಗಳು ರಾಹುಲ್ ದ್ರಾವಿಡ್-ರೋಹಿತ್ ಶರ್ಮಾರನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ದ್ರಾವಿಡ್ ಕೋಚ್ ಆಗಿದ್ದಾಗ ಆರಂಭದಲ್ಲಿ ಒಂದೆರಡು ಸರಣಿಗಳಲ್ಲಿ ಸೋತಿರಬಹುದಷ್ಟೇ. ಆದರೆ ನಂತರ ಐಸಿಸಿ ಟೂರ್ನಿಯಲ್ಲಿ ಸತತವಾಗಿ ಫೈನಲ್ ಗೇರಿದ್ದು ಅವರ ಕಾಂಬಿನೇಷನ್ ನಲ್ಲೇ. ಟೆಸ್ಟ್ ಕ್ರಿಕೆಟ್ ನಲ್ಲಿ ಈ ಹೀನಾಯ ಪರಿಸ್ಥಿತಿಯಲ್ಲಿ ಭಾರತ ಎಂದೂ ಇರಲಿಲ್ಲ. ಇದೇ ಕಾರಣಕ್ಕೆ ಅಭಿಮಾನಿಗಳು ಗರಂ ಆಗಿದ್ದಾರೆ. ರೋಹಿತ್, ಕೊಹ್ಲಿ, ಅಶ್ವಿನ್ ಎಂಬ ಟೆಸ್ಟ್ ಕ್ರಿಕೆಟ್ ನ ಮೂರು ರತ್ನಗಳನ್ನು ಏಕಕಾಲಕ್ಕೆ ನಿವೃತ್ತಿಯಾಗುವಂತೆ ಮಾಡಿ ಶುಭಮನ್ ಗಿಲ್ ಗೆ ನಾಯಕನ ಪಟ್ಟ ಕೊಡಿಸಿ ಗಂಭೀರ್ ಏನು ಸಾಧನೆ ಮಾಡಿದರು ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.