ಮೆಲ್ಬೊರ್ನ್: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸಂಕಷ್ಟದಲ್ಲಿದ್ದಾಗ ಟೀಂ ಇಂಡಿಯಾ ಪರ ಯುವ ಬ್ಯಾಟಿಗ ನಿತೀಶ್ ಕುಮಾರ್ ರೆಡ್ಡಿ ಶತಕ ಸಿಡಿಸಿ ಮಿಂಚಿದೆ ಅವರ ತಂದೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತು ಕಣ್ಣೀರು ಹಾಕಿದ್ದರು.
ನಿತೀಶ್ ಕುಮಾರ್ ಗೆ ಇಂದು ಶತಕ ಗಳಿಸಲು ನೆರವಾಗಿದ್ದು ಮೊಹಮ್ಮದ್ ಸಿರಾಜ್. ತಂಡ 9 ವಿಕೆಟ್ ಕಳೆದುಕಂಡಿದ್ದಾಗ ನಿತೀಶ್ 99 ರನ್ ಗಳಿಸಿ ಶತಕದ ಅಂಚಿನಲ್ಲಿದ್ದರು. ಸಿರಾಜ್ ಬಹುಶಃ ಆ ಮೂರು ಎಸೆತವನ್ನು ಯಶಸ್ವಿಯಾಗಿ ನಿಭಾಯಿಸದೇ ಇದ್ದಿದ್ದರೆ ನಿತೀಶ್ ಗೆ ಇಂದು ತಮ್ಮ ಕನಸಿನ ಶತಕ ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಮಗ ಶತಕ ಗಳಿಸಲಿ ಎಂದು ಅವರ ತಂದೆ ಮುತಾಲ್ಯ ರೆಡ್ಡಿ ಕೈ ಮುಗಿದು ಪ್ರಾರ್ಥನೆ ಮಾಡುತ್ತಲೇ ಇದ್ದರು.
ಮಗ ಶತಕ ಗಳಿಸಿದ ತಕ್ಷಣ ಅವರು ಖುಷಿಯಿಂದ ಕಣ್ಣೀರು ಹಾಕಿದ್ದಾರೆ. ಅವರ ಈ ಖುಷಿಗೆ ಕಾರಣವೂ ಇದೆ. ತಮ್ಮ ಮಗನಿಗಾಗಿ ಅವರು ತಮಗೆ ಸಿಕ್ಕಿದ್ದ ಸರ್ಕಾರೀ ಕೆಲಸವನ್ನೇ ತೊರೆದು ತ್ಯಾಗ ಮಾಡಿದ್ದರು. ಮಗನ ಕ್ರಿಕೆಟ್ ವೃತ್ತಿ ಬದುಕಿನ ಯಶಸ್ಸಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದರು. ಸರ್ಕಾರೀ ಉದ್ಯೋಗದಲ್ಲಿದ್ದ ಅವರು ರಾಜಸ್ಥಾನಕ್ಕೆ ವರ್ಗಾವಣೆಯಾಗಿದ್ದರೂ 8 ವರ್ಷದ ಮಗನ ಕ್ರಿಕೆಟ್ ಅಭ್ಯಾಸಕ್ಕೆ ತೊಂದರೆಯಾಗುತ್ತದೆಂದು ವೃತ್ತಿಯನ್ನೇ ತೊರೆದರು.
ಇಂದು ಮಗ ನಿತೀಶ್ ಶತಕ ಗಳಿಸಿ ತಮ್ಮ ಕನಸು ನನಸು ಮಾಡಿದ ಕ್ಷಣ ಮತ್ತು ತಾವು ಮಾಡಿದ ತ್ಯಾಗಕ್ಕೆ ತಕ್ಕ ಪ್ರತಿಫಲ ನೀಡಿದ್ದು ನೋಡಿ ಅವರು ನಿಜಕ್ಕೂ ಕಣ್ಣೀರು ಹಾಕಿದ್ದರು.