ಮುಂಬೈ: ಭಾರತ ತಂಡದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಅವರು ಪತ್ನಿ ಸಾಗರಿಕಾ ಜೊತೆ ಶಿರಡಿಗೆ ಭೇಟಿ ಕೊಟ್ಟು ಸಾಯಿಬಾಬಾ ದರ್ಶನ ಪಡೆದರು.
ಮಹಾರಾಷ್ಟ್ರದ ಶಿರಡಿಯ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಪತ್ನಿ ಸಮೇತರಾಗಿ ಸಾಯಿಬಾಬಾ ದರ್ಶನ ಪಡೆದರು.
ಸಾಯಿಬಾಬಾ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಹೀರ್ ಖಾನ್, ಶಿರಡಿಗೂ ನನಗೂ ತುಂಬಾ ನಿಕಟ ಸಂಬಂಧವಿದೆ. ನನ್ನ ಹುಟ್ಟೂರು ಶ್ರೀರಾಮಪುರ. ಇದು ಶಿರಡಿಗೆ ತುಂಬಾ ಸಮೀಪದಲ್ಲೇ ಇದೆ. ಚಿಕ್ಕವಯಸ್ಸಿನಿಂದಲೂ ಶಿರಡಿಗೆ ನಾನು ಆಗಾಗ ಕ್ರಿಕೆಟ್ ಟೂರ್ನಿಮೆಂಟ್ ಗಳಿಗಾಗಿ ಬರುತ್ತಿದ್ದೆ. ಅಲ್ಲದೆ ಬಾಬಾ ಮಂದಿರಕ್ಕೂ ಆಗಮಿಸಿ ದರ್ಶನ ಪಡೆಯುತ್ತಿದ್ದೆ. ಹೀಗಾಗಿ ಬಾಬಾ ದರ್ಶನ ನನಗೇನೂ ಹೊಸದಲ್ಲ. ಈ ಬಾರಿ ಪತ್ನಿ ಸಾಗರಿಕಾ ಜೊತೆ ಬಂದಿದ್ದೇನೆ ಎಂದಿದ್ದಾರೆ.
ತಮ್ಮ ಪತ್ನಿ ಸಾಗರಿಕಾ ಅವರು ಸಾಯಿಬಾಬಾ ಅವರ ಭಕ್ತೆಯಾಗಿದ್ದು, ಬಾಬಾ ಮೇಲೆ ಅಪಾರ ಭಕ್ತಿ ಹೊಂದಿದ್ದಾರೆ. ಆಕೆ ಕೂಡ ಸಾಕಷ್ಟು ಬಾರಿ ಶಿರಡಿ ಸಾಯಿಬಾಬಾ ಮಂದಿರಕ್ಕೆ ಬರುತ್ತಿರುತ್ತಾರೆ. ಈ ಬಾರಿ ನಾವಿಬ್ಬರೂ ಒಟ್ಟಿಗೆ ದರ್ಶನ ಪಡೆದೆವು ಎಂದು ಹೇಳಿದ್ದಾರೆ.