ಕೋಲ್ಕೊತ್ತಾ: ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುವಾಗ ಟಿಎಂಸಿ ನಾಯಕಿ, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಲ್ಲಾ ಲೈಟ್ ಗಳನ್ನೂ ಸ್ವಿಚ್ ಆಫ್ ಮಾಡಿದ್ದರು ಎಂದು ಟಿಎಂಸಿ ಸಂಸದೆ ಸಾಗರಿಕಾ ಘೋಷ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಭಾನುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಹಾಗೂ ಎನ್ ಡಿಎ ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಈ ಬಾರಿ ಬಿಜೆಪಿಗೆ ಬಹುಮತ ಬಂದಿಲ್ಲ. ಹೀಗಾಗಿ ಮಿತ್ರ ಪಕ್ಷಗಳ ಸಹಾಯದೊಂದಿಗೆ ಸರ್ಕಾರ ರಚಿಸುತ್ತಿದೆ. ಈ ಪ್ರಮಾಣ ವಚನ ಸಮಾರಂಭಕ್ಕೆ ಮಮತಾ ಬ್ಯಾನರ್ಜಿಗೂ ಆಹ್ವಾನ ನೀಡಲಾಗಿತ್ತು. ಆದರೆ ಅವರು ಆಹ್ವಾನ ತಿರಸ್ಕರಿಸಿದ್ದರು. ವಿಪಕ್ಷಗಳ ಕಡೆಯಿಂದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ತಮ್ಮ ಮನೆಯ ಎಲ್ಲಾ ಲೈಟ್ ಗಳನ್ನೂ ಆಫ್ ಮಾಡಿದ್ದರು ಎಂದು ಸಾಗರಿಕಾ ಹೇಳಿದ್ದಾರೆ. ಇದಕ್ಕೆ ಮೊದಲು ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಪ್ರಜಾಪ್ರಭುತ್ವ ವಿರೋಧಿ, ಅಸಂವಿಧಾನಿಕ ಮತ್ತು ಅಕ್ರಮ ಎಂದು ಮಮತಾ ವಾಗ್ದಾಳಿ ನಡೆಸಿದ್ದರು.
ಎಲ್ಲರೂ ಮೋದಿ ಪ್ರಮಾಣ ವಚನವನ್ನು ಸಂಭ್ರಮಿಸುತ್ತಿರುವಾಗ ಭಾರತದ ಏಕೈಕ ಮಹಿಳಾ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಲೈಟ್ ಗಳನ್ನು ಸ್ವಿಚ್ ಆಫ್ ಮಾಡಿ ಇದೊಂದು ಕರಾಳ ಸಂದರ್ಭವೆಂದು ಆಚರಿಸಿದರು. ಜನಾದೇಶಕ್ಕೆ ವಿರುದ್ಧವಾಗಿ ಮೋದಿ ಸರ್ಕಾರ ರಚನೆ ಮಾಡುವುದನ್ನು ಅವರು ಈ ರೀತಿ ಆಚರಿಸಿದರು. ವಾರಣಾಸಿಯಲ್ಲಿ ಹೆಚ್ಚು ಕಡಿಮೆ ಸೋಲುವ ಹಂತಕ್ಕೆ ಬಂದಿದ್ದ ಮೋದಿ ಬದಲು ಬಿಜೆಪಿ ಬೇರೆ ಅಭ್ಯರ್ಥಿಯನ್ನು ಪ್ರಧಾನಿಯಾಗಿ ಮಾಡಬೇಕಿತ್ತು ಎಂದು ಸಾಗರಿಕಾ ಹೇಳಿದ್ದಾರೆ.