ಲಕ್ನೋ: ಐಪಿಎಲ್ ನ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲಿಕ ಸಂಜಯ್ ಗೊಯೆಂಕಾ ಮತ್ತೆ ಕನ್ನಡಿಗ ಕೆಎಲ್ ರಾಹುಲ್ ಗೆ ಅವಮಾನ ಮಾಡಿದ್ದಾರೆ. ರಾಹುಲ್ ಲಕ್ನೋ ತಂಡದಿಂದ ರಿಲೀಸ್ ಆಗಲಿದ್ದಾರೆ ಎಂಬ ಸುದ್ದಿಗಳ ನಡುವೆಯೇ ಅವರು ಅವಮಾನಿಸಿದ್ದಾರೆ.
ಈ ಬಾರಿ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಲಕ್ನೋ ತಂಡ ನಾಯಕ ಕೆಎಲ್ ರಾಹುಲ್ ರನ್ನು ಕೈ ಬಿಡಲಿದೆ ಎಂಬ ಸುದ್ದಿ ದಟ್ಟವಾಗಿದೆ. ಕಳೆದ ಬಾರಿ ರಾಹುಲ್ ನಾಯಕತ್ವದ ಶೈಲಿ ಮಾಲಿಕ ಸಂಜಯ್ ಅಸಮಾಧಾನಕ್ಕೆ ಕಾರಣವಾಗಿತ್ತು. ಮೈದಾನದಲ್ಲಿಯೇ ರಾಹುಲ್ ಮೇಲೆ ಅವರು ಬೈದಾಡಿದ್ದರು.
ಹೀಗಾಗಿ ಈ ಬಾರಿ ರಾಹುಲ್ ಬೇರೆ ತಂಡ ಕೂಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಮೂಲಗಳ ಪ್ರಕಾರ ರಾಹುಲ್ ಆರ್ ಸಿಬಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ. ಇದರ ಬೆನ್ನಲ್ಲೇ ಸಂಜಯ್ ಗೊಯೆಂಕಾ ಕೆಎಲ್ ರಾಹುಲ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ನಮಗೆ ತಂಡಕ್ಕಾಗಿ ಆಡುವ ಮತ್ತು ಗೆಲ್ಲುವ ಮನಸ್ಥಿತಿಯ ಆಟಗಾರರು ಬೇಕು. ಸ್ವ ಹಿತಾಸಕ್ತಿಗೆ ಆಡುವ ಆಟಗಾರರನ್ನು ತಂಡದಲ್ಲಿ ಇಟ್ಟುಕೊಳ್ಳಲು ಬಯಸುವುದಿಲ್ಲ ಎಂದಿದ್ದಾರೆ. ಇದು ರಾಹುಲ್ ಕುರಿತಾಗಿಯೇ ನೀಡಿರುವ ಹೇಳಿಕೆ ಎನ್ನಲಾಗಿದ್ದು ಅಭಿಮಾನಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.