ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಆಂತಿಮ ಪಂದ್ಯವನ್ನಾದರೂ ಗೆಲ್ಲಬೇಕು ಎಂದು ಹೊರಟಿದ್ದು ಈ ಪಂದ್ಯಕ್ಕೆ ಲಕ್ಕಿ ಮ್ಯಾನ್ ಕೆಎಲ್ ರಾಹುಲ್ ರಿ ಎಂಟ್ರಿಯಾಗುವ ಸಾಧ್ಯತೆಯಿದೆ.
ಕೆಎಲ್ ರಾಹುಲ್ ಕಳಪೆ ಫಾರ್ಮ್ ನಲ್ಲಿರುವ ಕಾರಣಕ್ಕೆ ಕಳೆದ ಪಂದ್ಯದಿಂದ ಅವರನ್ನು ತಂಡದಿಂದ ಹೊರಗಿಡಲಾಯಿತು. ಹಾಗಿದ್ದರೂ ತಂಡದ ಬ್ಯಾಟಿಂಗ್ ವೈಫಲ್ಯವೇನೂ ಸುಧಾರಿಸಿಲ್ಲ. ಕಳೆದ ಪಂದ್ಯದಲ್ಲೂ ಟೀಂ ಇಂಡಿಯಾ ಬ್ಯಾಟಿಗರಿಂದಲೇ ಪಂದ್ಯ ಸೋಲುವಂತಾಯಿತು.
ಇದರ ಬೆನ್ನಲ್ಲೇ ಕೆಲವರು ಕೆಎಲ್ ರಾಹುಲ್ ರನ್ನು ಹೊರಗಿಟ್ಟು ಏನು ಸಾಧಿಸಿದಿರಿ ಎಂದು ಪ್ರಶ್ನೆ ಮಾಡಿದ್ದಾರೆ. ರನ್ ಗಳಿಸಲಿ, ಬಿಡಲಿ ಕೆಎಲ್ ರಾಹುಲ್ ತಂಡದಲ್ಲಿದ್ದರೆ ಒಂಥರಾ ಲಕ್ಕಿ ಸ್ಟಾರ್ ಇದ್ದಂತೆ ಎಂದು ಅವರ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇದೀಗ ಅನುಭವಿ ಕೆಎಲ್ ರಾಹುಲ್ ರನ್ನು ಮತ್ತೆ ಕೊನೆಯ ಪಂದ್ಯಕ್ಕೆ ಆಡುವ ಬಳಗದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಕಳೆದ ಪಂದ್ಯಕ್ಕೆ ವಾಷಿಂಘ್ಟನ್ ಸುಂದರ್ ರನ್ನು ತಂಡಕ್ಕೆ ಕರೆಸಿಕೊಂಡಿದ್ದು ನಷ್ಟವೇನೂ ಆಗಲಿಲ್ಲ. ಆದರೆ ಬ್ಯಾಟಿಂಗ್ ನಲ್ಲಿ ಅನುಭವಿ ಆಟಗಾರರೇ ಕೈ ಕೊಡುತ್ತಿರುವುದು ತಂಡಕ್ಕೆ ತಲೆನೋವಾಗಿದೆ. ಈ ಹುಳುಕನ್ನು ಸರಿಪಡಿಸಿಕೊಳ್ಳುವುದರ ಜೊತಗೆ ಮುಂದಿನ ಪಂದ್ಯಕ್ಕೆ ಆಡುವ ಬಳಗದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಲು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಸಿದ್ಧವಾಗಿದೆ.