Publish Date: Tue, 29 Oct 2024 (08:48 IST)
Updated Date: Tue, 29 Oct 2024 (08:51 IST)
ಬೆಂಗಳೂರು: ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಓರ್ವ ವಿಕೆಟ್ ಕೀಪರ್ ಬ್ಯಾಟಿಗನನ್ನು ಖರೀದಿಸಲು ತಯಾರಿ ನಡೆಸಿದೆ. ಇದೀಗ ಆರ್ ಸಿಬಿ ಎದುರು ಇಬ್ಬರು ಸ್ಟಾರ್ ಆಟಗಾರರಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ಈ ಬಾರಿ ತನ್ನ ಸ್ಟಾರ್ ಆಟಗಾರ, ಕನ್ನಡಿಗ ಕೆಎಲ್ ರಾಹುಲ್ ರನ್ನು ಕೈ ಬಿಡುವುದು ಬಹುತೇಕ ನಿಶ್ಚಿತವಾಗಿದೆ. ಕೆಎಲ್ ರಾಹುಲ್ ರನ್ನು ಆರ್ ಸಿಬಿ ಕರೆಸಬೇಕು ಎಂದು ಅಭಿಮಾನಿಗಳಿಂದ ಭಾರೀ ಒತ್ತಾಯವಿದೆ. ಆರ್ ಸಿಬಿಗೆ ಬರ್ತೀರಾ ಎಂದು ಕೇಳಿದಾಗಲೆಲ್ಲಾ ರಾಹುಲ್ ಕೂಡಾ ಸಕಾರಾತ್ಮಕವಾಗಿಯೇ ಮಾತನಾಡಿದ್ದಾರೆ.
ಆರ್ ಸಿಬಿ ವಿಕೆಟ್ ಕೀಪರ್ ಬ್ಯಾಟಿಗನ ಜೊತೆ ಒಬ್ಬ ನಾಯಕನ ಅಗತ್ಯವೂ ಇದೆ. ಹೀಗಾಗಿ ಆ ಸ್ಥಾನ ತುಂಬಬಲ್ಲ ಆಟಗಾರರೆಂದರೆ ಕೆಎಲ್ ರಾಹುಲ್. ಅವರ ಹೊರತಾಗಿ ಡೆಲ್ಲಿ ಕ್ಯಾಪಿಟಲ್ಸ್ ರಿಷಭ್ ಪಂತ್ ರನ್ನು ರಿಲೀಸ್ ಮಾಡಿದರೆ ಅವರನ್ನಾದರೂ ತಂಡಕ್ಕೆ ಖರೀದಿ ಮಾಡಲು ಆರ್ ಸಿಬಿ ಚಿಂತನೆ ನಡೆಸಲಿದೆ.
ಈ ಇಬ್ಬರೂ ಆರ್ ಸಿಬಿಯ ಅಗತ್ಯವನ್ನು ನೀಗಿಸಬಲ್ಲರು. ಆದರೆ ಆರ್ ಸಿಬಿಯಲ್ಲಿ ಕನ್ನಡಿಗ ಆಟಗಾರರ ಕೊರತೆಯಿದೆ. ಈ ಕಾರಣಕ್ಕೆ ರಾಹುಲ್ ರನ್ನು ಖರೀದಿಸಿ ಎಂದು ಅಭಿಮಾನಿಗಳಿಂದ ಒತ್ತಾಯವಿದೆ. ಈ ಕಾರಣಕ್ಕೆ ರಾಹುಲ್ ಈ ಬಾರಿ ಆರ್ ಸಿಬಿ ತಂಡ ಸೇರುವುದು ಬಹುತೇಕ ನಿಶ್ಚಿತವಾಗಿದೆ.