ಪರ್ತ್: ಟೀಂ ಇಂಡಿಯಾ ಖಾಯಂ ನಾಯಕ ರೋಹಿತ್ ಶರ್ಮಾ ಗೈರಾಗಿರುವ ಬೆನ್ನಲ್ಲೇ ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು ಎಲ್ಲರೂ ಹುಬ್ಬೇರುವಂತೆ ಮಾಡಿದೆ.
ರೋಹಿತ್ ಶರ್ಮಾ ಪತ್ನಿಯ ಹೆರಿಗೆಯ ಕಾರಣಕ್ಕೆ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಗೈರಾಗಿದ್ದಾರೆ. ಹೀಗಾಗಿ ಬುಮ್ರಾ ಮೊದಲ ಪಂದ್ಯಕ್ಕೆ ಟೀಂ ಇಂಡಿಯಾದ ನಾಯಕರಾಗಲಿದ್ದಾರೆ. ನಾಳೆಯಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯಕ್ಕೆ ಮುನ್ನ ಬುಮ್ರಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಈ ವೇಳೆ ಪತ್ರಕರ್ತರೊಬ್ಬರು ಮಧ್ಯಮ ವೇಗಿಯಾಗಿ ತಂಡದ ನಾಯಕರಾಗಿರುವುದಕ್ಕೆ ಏನು ಅನಿಸುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಬುಮ್ರಾ ಗೆಳೆಯ ನಾನು 150 ಕೆಎಂಪಿಎಚ್ ವೇಗದಲ್ಲೂ ಚೆಂಡೆಸೆಯಬಲ್ಲೆ. ನಾನು ವೇಗದ ಬೌಲರ್ ಎಂದು ತಿದ್ದಿದ್ದಾರೆ. ಬಳಿಕ ನನಗೂ ಖಾಯಂ ನಾಯಕನಾಗುವ ಆಸೆಯಿದೆ ಎಂದು ಮನದಾಳ ವ್ಯಕ್ತಪಡಿಸಿದ್ದಾರೆ.
ವೇಗದ ಬೌಲರ್ ಗಳು ನಾಯಕರಾಗಬೇಕು ಎಂದು ನಾನು ಯಾವಾಗಲೂ ಹೇಳುತ್ತೇನೆ. ಯಾಕೆಂದರೆ ವೇಗದ ಬೌಲರ್ ಗಳು ಯೋಜನೆಯಲ್ಲಿ ನಿಪುಣರಾಗಿರುತ್ತಾರೆ. ಬೇಕಿದ್ದರೆ ನೀವು ಪ್ಯಾಟ್ ಕುಮಿನ್ಸ್ ಅವರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಈ ಹಿಂದೆಯೂ ಅಂತಹ ಸಾಕಷ್ಟು ಉದಾಹರಣೆಗಳಿವೆ. ಭಾರತದ ಪರ ಕಪಿಲ್ ದೇವ್ ಯಶಸ್ವೀ ನಾಯಕರಾಗಿದ್ದರು. ನಾನೂ ಈ ಮೂಲಕ ಹೊಸ ಅಧ್ಯಾಯ ಆರಂಭಿಸಬಹುದು ಎಂದುಕೊಂಡಿದ್ದೇನೆ ಎಂದಿದ್ದಾರೆ. ಆ ಮೂಲಕ ತಮಗೂ ಟೆಸ್ಟ್ ತಂಡಕ್ಕೆ ಖಾಯಂ ನಾಯಕನಾಗುವ ಬಯಕೆ ವ್ಯಕ್ತಪಡಿಸಿದ್ದಾರೆ.