ಪರ್ತ್: ಇಷ್ಟು ದಿನ ಪತ್ನಿಯ ಹೆರಿಗೆ ಡೇಟ್ ಹತ್ತಿರವಿದೆ ಎಂಬ ಕಾರಣಕ್ಕೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಗೈರಾಗಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಈಗ ಹೆರಿಗೆಯಾಗಿ ಮಗು ಬಂದರೂ ರೋಹಿತ್ ಮೊದಲ ಪಂದ್ಯದಲ್ಲಿ ಭಾಗಿಯಾಗುತ್ತಿಲ್ಲ ಎಂಬುದು ಖಚಿತವಾಗಿದೆ.
ಮೊನ್ನೆಯಷ್ಟೇ ರೋಹಿತ್-ರಿತಿಕಾ ದಂಪತಿ ಗಂಡು ಮಗುವಿನ ಪೋಷಕರಾಗಿದ್ದಾರೆ. ನವಂಬರ್ 22 ರಿಂದ ಪರ್ತ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ರಿತಿಕಾ ಹೆರಿಗೆ ನಿಮಿತ್ತ ರೋಹಿತ್ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿರಲಿಲ್ಲ. ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳುವುದು ಅನುಮಾನ ಎನ್ನಲಾಗಿತ್ತು.
ಆದರೆ ಮೊನ್ನೆ ರಿತಿಕಾಗೆ ಹೆರಿಗೆಯಾಗಿದ್ದು ರೋಹಿತ್ ಈಗ ನಿರಾತಂಕವಾಗಿ ಮೊದಲ ಪಂದ್ಯಕ್ಕೆ ತೆರಳಲಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅದು ಸುಳ್ಳಾಗಿದೆ. ಇನ್ನೂ ಪತ್ನಿ, ಮಗನ ಜೊತೆಗಿದ್ದು ಫ್ಯಾಮಿಲಿ ಡ್ಯೂಟಿ ಮಾಡಲು ನಿರ್ಧರಿಸಿರುವ ರೋಹಿತ್ ಮೊದಲ ಪಂದ್ಯಕ್ಕೆ ಲಭ್ಯರಾಗುವುದಿಲ್ಲ ಎಂದು ಖಚಿತವಾಗಿದೆ. ಅವರ ಸ್ಥಾನದಲ್ಲಿ ಜಸ್ಪ್ರೀತ್ ಬುಮ್ರಾ ತಂಡದ ನಾಯಕರಾಗಲಿದ್ದಾರೆ.
ರೋಹಿತ್ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿಲ್ಲ. ಕೆಲವು ದಿನಗಳ ಕಾಲ ಪತ್ನಿ ಜೊತೆ ಕಾಲ ಕಳೆಯಲಿದ್ದಾರೆ. ಅವರ ಸ್ಥಾನದಲ್ಲಿ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಅಭ್ಯಾಸದ ವೇಳೆ ಗಾಯಗೊಂಡಿದ್ದ ಕೆಎಲ್ ರಾಹುಲ್ ಚೇತರಿಸಿಕೊಂಡಿದ್ದಾರೆ ಎಂದು ಬಿಸಿಸಿಐ ನಿನ್ನೆ ಪ್ರಕಟಣೆ ನೀಡಿತ್ತು. ಎರಡನೇ ಪಂದ್ಯದ ವೇಳೆಗೆ ರೋಹಿತ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.