ಮುಂಬೈ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಟೀಂ ಇಂಡಿಯಾದ ಹಿರಿಯ ಆಟಗಾರರಿಗೆ ಈಗ ನಿವೃತ್ತಿಯ ಒತ್ತಡ ಶುರುವಾಗಿದೆ. ಇದಕ್ಕಾಗಿ ಆಯ್ಕೆಗಾರ ಅಜಿತ್ ಅಗರ್ಕರ್ ಆಸ್ಟ್ರೇಲಿಯಾದಲ್ಲೇ ಉಳಿದುಕೊಂಡಿದ್ದಾರೆ ಎಂಬ ಮಾಹಿತಿಯಿದೆ.
ಟೀಂ ಇಂಡಿಯಾದಲ್ಲಿ ಈಗ 30 ದಾಟಿದ ಹಿರಿಯ ಆಟಗಾರರನ್ನು ಪಕ್ಕಕ್ಕಿಟ್ಟು ಹೊಸ ತಂಡ ಕಟ್ಟುವ ಯೋಜನೆ ಬಿಸಿಸಿಐ ಮುಂದಿದೆ. ಅದೇ ಕಾರಣಕ್ಕೆ ಕೋಚ್ ಆಗಿ ಗೌತಮ್ ಗಂಭೀರ್ ರನ್ನು ಆಯ್ಕೆ ಮಾಡಿರುವುದು. ಗಂಭೀರ್ ಐಪಿಎಲ್ ನಲ್ಲೂ ಅನೇಕ ಯುವ ಆಟಗಾರರನ್ನು ಪರಿಚಯಿಸಿದ್ದಾರೆ.
ಇದೀಗ ಟೀಂ ಇಂಡಿಯಾ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾಗೆ ತೆರಳಿದೆ. ತಂಡದ ಜೊತೆಗೆ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕೂಡಾ ಇದ್ದಾರೆ. ಈ ಸರಣಿಯಲ್ಲಿ ಹಿರಿಯ ಆಟಗಾರರ ಪ್ರದರ್ಶನದ ಬಗ್ಗೆ ಬಿಸಿಸಿಐ ಸೂಕ್ಷ್ಮವಾಗಿ ಅವಲೋಕನ ಮಾಡಲಿದೆ. ಒಂದು ವೇಳೆ ರೋಹಿತ್, ಕೊಹ್ಲಿ ಸೇರಿದಂತೆ ಹಿರಿಯ ಆಟಗಾರರು ಈ ಸರಣಿಯಲ್ಲಿ ವಿಫಲರಾದರೆ ಮುಂದೆ ಅವರ ಮೇಲೆ ನಿವೃತ್ತಿಯ ತೂಗುಗತ್ತಿ ಬೀಳಲಿದೆ.
ಮುಂದೆ 12 ತಿಂಗಳ ಗಡುವು ನೀಡಬಹುದು. ಇಲ್ಲವೇ ಯಾವಾಗ ನಿವೃತ್ತಿಯಾಗುತ್ತೀರಿ ಎಂದು ಅಂದಾಜು ಸಮಯ ನೀಡುವಂತೆ ಈ ಹಿರಿಯ ಆಟಗಾರರನ್ನು ಕೇಳಬಹುದು. ಇದಕ್ಕಾಗಿಯೇ ಅಜಿತ್ ಅಗರ್ಕರ್, ಕೋಚ್ ಗೌತಮ್ ಗಂಭೀರ್ ಜೊತೆಗೂಡಿ ಕೆಲಸ ಮಾಡಲು ಆಸ್ಟ್ರೇಲಿಯಾದಲ್ಲಿ ಐದೂ ಟೆಸ್ಟ್ ಪಂದ್ಯಗಳ ವೇಳೆ ಜೊತೆಗಿರಲು ಬಿಸಿಸಿಐ ಸೂಚನೆ ನೀಡಿದೆ ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ ಮುಂದಿನ ವರ್ಷ ರೋಹಿತ್, ಕೊಹ್ಲಿಯಂತಹ ದಿಗ್ಗಜ ಆಟಗಾರರ ನಿವೃತ್ತಿಯ ಕಹಿ ಸುದ್ದಿ ಕೇಳಬೇಕಾಗಿ ಬರಬಹುದು.