ನವದೆಹಲಿ: ರೋಜರ್ ಫೆಡರರ್ ಉತ್ತುಂಗದಲ್ಲಿದ್ದಾಗ ಅವರಿಗೆ ಠಕ್ಕರ್ ಕೊಡಲು ಬಂದ ಸ್ಪೇನ್ ನ ರಾಫೆಲ್ ನಡಾಲ್ ಎಂಬ ಟೆನಿಸ್ ದೊರೆ. ಇದೀಗ ತಮ್ಮ 20 ವರ್ಷಗಳ ಟೆನಿಸ್ ಬದುಕಿಗೆ ಕಣ್ಣೀರಿನ ವಿದಾಯ ಘೋಷಿಸಿದ್ದಾರೆ.
ರಾಫೆಲ್ ನಡಾಲ್ ಈ ಹಿಂದೆಯೇ ಡೇವಿಸ್ ಕಪ್ ನನ್ನ ವೃತ್ತಿ ಜೀವನದ ಕೊನೆಯ ಟೂರ್ನಿ ಎಂದಿದ್ದರು. ಅದರಂತೆ ಇದೀಗ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ನಲ್ಲಿ ಸ್ಪೇನ್ 1-2 ಅಂತರದಿಂದ ಸೋಲು ಅನುಭವಿಸುತ್ತಿದ್ದಂತೇ ರಾಫೆಲ್ ನಡಾಲ್ ನಿವೃತ್ತಿ ಹೇಳಿದ್ದಾರೆ. ಟೆನಿಸ್ ಜಗತ್ತಿನ ಮತ್ತೊಬ್ಬ ದಿಗ್ಗಜನ ವಿದಾಯಕ್ಕೆ ಟೆನಿಸ್ ಅಭಿಮಾನಿಗಳು ಕಣ್ಣೀರು ಮಿಡಿದಿದ್ದಾರೆ.
ಕೊನೆಯ ಪಂದ್ಯದ ವೇಳೆ ನಡಾಲ್ ಕೂಡಾ ಕಣ್ಣೀರು ಹಾಕಿದ್ದಾರೆ. ಆವೆ ಮಣ್ಣಿನ ಅಂಕಣದ ಕಿಂಗ್ ಎಂದೇ ಕರೆಯಿಸಿಕೊಂಡಿದ್ದ ನಡಾಲ್ ಕ್ಲೇ ಕೋರ್ಟ್ ನಲ್ಲಿ ಒಟ್ಟು 63 ಸಿಂಗಲ್ಸ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಒಟ್ಟು 1080 ಸಿಂಗಲ್ಸ್ ಜಯ, 92 ಸಿಂಗಲ್ಸ್ ಪ್ರಶಸ್ತಿಗಳು, 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳು, 2 ಒಲಿಂಪಿಕ್ಸ್ ಚಿನ್ನದ ಪದಕ ಅವರ ಸಾಧನೆಗೆ ಸಾಕ್ಷಿಯಾಗಿದೆ.
ಕ್ಲೇ ಕೋರ್ಟ್ ನಲ್ಲೇ 14 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದ್ದರು. ನೊವಾಕ್ ಜೊಕೊವಿಕ್ ಬಳಿಕ ಅತ್ಯಂತ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಟೆನಿಸ್ ತಾರೆ ಎಂಬ ಹೆಗ್ಗಳಿಕೆಯೂ ಅವರದ್ದಾಗಿತ್ತು. 4 ಬಾರಿ ಯುಎಸ್ ಓಪನ್, ತಲಾ 2 ಬಾರಿ ವಿಂಬಲ್ಡನ್ ಮತ್ತು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಪಡೆದಿದ್ದರು. ವೃತ್ತಿ ಬದುಕಿನ ಕೊನೆಯ ಪಂದ್ಯವನ್ನು ಸೋತು, ನೆರೆದಿದ್ದವರನ್ನೂ ಭಾವುಕರಾಗಿಸಿ ವಿದಾಯ ಘೋಷಿಸಿದ್ದಾರೆ.