ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಇಂದು ಟೀಂ ಇಂಡಿಯಾ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಎಲ್ಲರಿಗೂ ಗೊತ್ತಿರುವ ಹಾಗೆ ಸೂರ್ಯಕುಮಾರ್ ಪತ್ನಿ ದೇವಿಶಾ ಮೂಲತಃ ಮಂಗಳೂರಿನವರು. ಇದೀಗ ತಮ್ಮ ಪತಿಯ ಜೊತೆಗೆ ದೇವಿಶಾ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಕ್ರಿಕೆಟಿಗನನ್ನು ನೋಡಲು, ಸೆಲ್ಫೀ ತೆಗೆಸಿಕೊಳ್ಳಲು ಸಾಕಷ್ಟು ಜನ ಮುಗಿಬಿದ್ದರು.
ಟಿ20 ವಿಶ್ವಕಪ್ ಫೈನಲ್ ಗೆದ್ದ ಬಳಿಕ ಸೂರ್ಯಕುಮಾರ್ ಕಾಪು ಮಾರಿಗುಡಿ ಕ್ಷೇತ್ರಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದರು. ಇದೀಗ ದಕ್ಷಿಣಾ ಆಫ್ರಿಕಾ ವಿರುದ್ಧ ಟಿ20 ಸರಣಿ ಗೆದ್ದ ಬೆನ್ನಲ್ಲೇ ಪತ್ನಿ ಮತ್ತು ಕುಟುಂಬಸ್ಥರ ಜೊತೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಸಾಂಪ್ರದಾಯಿಕವಾಗಿ ಪಂಚೆ, ಶಲ್ಯ ತೊಟ್ಟುಕೊಂಡು ಬಂದ ಸೂರ್ಯಕುಮಾರ್ ಯಾದವ್, ಆಶ್ಲೇಷ ಬಲಿ, ಅಭಿಷೇಕ, ಮಹಾಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದ ವತಿಯಿಂದ ಅವರನ್ನು ಸನ್ಮಾನಿಸಲಾಗಿತ್ತು. ಸರ್ಪದೋಷವಿದ್ದರೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಪೂಜೆ ಸಲ್ಲಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸೇರಿದಂತೆ ಅನೇಕ ಕ್ರಿಕೆಟಿಗರು ಇಲ್ಲಿಗೆ ಬಂದು ಪೂಜೆ ಸಲ್ಲಿಸಿದ ಉದಾಹರಣೆಯಿದೆ.