ವಾಂಡರ್ಸಸ್: ದ ಆಫ್ರಿಕಾ ವಿರುದ್ಧ ನಾಲ್ಕನೇ ಟಿ20 ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೈದಾನದಲ್ಲಿ ಬಿದ್ದಿದ್ದ ರವಿ ಬಿಷ್ಣೋಯ್ ಕ್ಯಾಪ್ ಮೆಟ್ಟಿದ್ದಕ್ಕೆ ತೋರಿದ ವರ್ತನೆ ಎಲ್ಲರ ಗಮನ ಸೆಳೆಯುತ್ತಿದೆ.
ದ ಆಫ್ರಿಕಾ ಬ್ಯಾಟಿಂಗ್ ವೇಳೆ ವಿಕೆಟ್ ಕಿತ್ತ ಸಂಭ್ರಮದಲ್ಲಿ ಭಾರತೀಯ ಆಟಗಾರರಿದ್ದರು. ರವಿ ಬಿಷ್ಣೋಯ್ ರನ್ನು ತಬ್ಬಿ ಸೂರ್ಯಕುಮಾರ್ ಸಂಭ್ರಮಾಚರಣೆ ಮಾಡುತ್ತಿದ್ದರು. ಈ ವೇಳೆ ರವಿ ಬಿಷ್ಣೋಯ್ ಕ್ಯಾಪ್ ನೆಲಕ್ಕೆ ಬಿದ್ದಿತ್ತು. ಈ ವೇಳೆ ಸೂರ್ಯ ವರ್ತನೆ ಟಿವಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.
ಮೊದಲು ಸೂರ್ಯ ಕ್ಯಾಪ್ ಬಿದ್ದಿದ್ದನ್ನು ಗಮನಿಸಿರಲಿಲ್ಲ. ಹೀಗಾಗಿ ಅವರು ಗೊತ್ತಿಲ್ಲದೇ ಕ್ಯಾಪ್ ಮೆಟ್ಟಿದ್ದರು. ಆದರೆ ಬಳಿಕ ಅವರಿಗೆ ಅದು ಅರಿವಿಗೆ ಬಂತು. ತಕ್ಷಣವೇ ಕ್ಯಾಪ್ ನ್ನು ಎತ್ತಿಕೊಂಡ ಸೂರ್ಯ ಅದನ್ನು ಕಣ್ಣಿಗೊತ್ತಿ ಮುತ್ತು ಕೊಟ್ಟು ನಮಸ್ಕರಿಸಿ ರವಿ ಬಿಷ್ಣೋಯ್ ಗೆ ಹಸ್ತಾಂತರಿಸಿದ್ದಾರೆ.
ಕ್ರೀಡಾಳುಗಳು ಕ್ಯಾಪ್ ಗೆ ತುಂಬಾ ಗೌರವ ಕೊಡುತ್ತಾರೆ. ಅದರಲ್ಲೂ ಭಾರತೀಯರು ಕ್ಯಾಪ್ ನ್ನು ಗೌರವದಿಂದ ಕಾಣುತ್ತಾರೆ ಎಂಬುದಕ್ಕೆ ಸೂರ್ಯ ವರ್ತನೆಯೇ ಸಾಕ್ಷಿ. ವಿಡಿಯೋ ನೋಡಿದ ನೆಟ್ಟಿಗರು ಇದು ಭಾರತೀಯ ಸಂಸ್ಕೃತಿ ಎಂದರೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.