Publish Date: Sat, 16 Nov 2024 (10:43 IST)
Updated Date: Sat, 16 Nov 2024 (10:45 IST)
ವಾಂಡರರ್ಸ್: ದ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಶತಕ ಸಿಡಿಸಿದ ಬಳಿಕ ಸಂಜು ಸ್ಯಾಮ್ಸನ್ ಮುಂದಿನ ಎರಡೂ ಪಂದ್ಯಗಳಲ್ಲಿ ಸತತವಾಗಿ ಎರಡು ಪಂದ್ಯಗಳಲ್ಲಿ ಶೂನ್ಯ ಸಂಪಾದಿಸಿದ್ದರು. ಇದಾದ ಬಳಿಕ ಅವರು ಕಮ್ ಬ್ಯಾಕ್ ಮಾಡಿದ್ದೇ ಪವಾಡ.
ಸಂಜು ಸ್ಯಾಮ್ಸನ್ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದಾಗ ಅವರ ತಂದೆ ನನ್ನ ಮಗನ 10 ವರ್ಷದ ವೃತ್ತಿ ಜೀವನ ಹಾಳು ಮಾಡಿದರು ಎಂದು ಈ ಹಿಂದಿನ ನಾಯಕರ ಬಗ್ಗೆ ಪರೋಕ್ಷವಾಗಿ ಕಿಡಿ ಕಾರಿದ್ದರು. ಆದರೆ ಮುಂದಿನ ಎರಡೂ ಪಂದ್ಯಗಳಲ್ಲಿ ಸಂಜು ಶೂನ್ಯಕ್ಕೆ ಔಟಾದಾಗ ತೀವ್ರ ಟ್ರೋಲ್ ಗೊಳಗಾಗಿದ್ದರು.
ಹೀಗಾಗಿ ನಾಲ್ಕನೇ ಪಂದ್ಯವನ್ನು ಸಂಜು ಗಂಭೀರವಾಗಿ ಪರಿಗಣಿಸಿದ್ದರು. ಈ ಕಾರಣಕ್ಕೆ ಅವರು ನಾಲ್ಕನೇ ಟಿ20 ಪಂದ್ಯಕ್ಕೆ ಮುನ್ನ ಸಂಜು ಮತ್ತೆ ಫಾರ್ಮ್ ಕಂಡುಕೊಳ್ಳಲು ತೀವ್ರ ಪ್ರಯತ್ನ ನಡೆಸಿದ್ದಾರೆ. ನಾಲ್ಕನೇ ಪಂದ್ಯಕ್ಕೆ ಮುನ್ನ ಬೇರೆ ಆಟಗಾರರು ಅಭ್ಯಾಸ ನಡೆಸುತ್ತಾರೋ ಬಿಡುತ್ತಾರೋ ಸಂಜು ಮಾತ್ರ ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸಿದ್ದಾರಂತೆ.
ಕೋಚ್ ವಿವಿಎಸ್ ಲಕ್ಷ್ಮಣ್ ಕಣ್ಗಾವಲಿನಲ್ಲಿ ಸಂಜು ಕಠಿಣ ಅಭ್ಯಾಸ ನಡೆಸಿದ್ದಾರಂತೆ. ಎರಡು ಶೂನ್ಯದ ಬಳಿಕ ಧೃತಿಗೆಟ್ಟಿದ್ದ ಸಂಜು ಮತ್ತೆ ಉತ್ತಮ ಪ್ರದರ್ಶನ ನೀಡಲೇಬೇಕು ಎಂದು ಹಠಕ್ಕೆ ಬಿದ್ದು ಅಭ್ಯಾಸ ನಡೆಸಿದ್ದರ ಪರಿಣಾಮವೇ ನಿನ್ನೆಯ ಪಂದ್ಯದಲ್ಲಿ ಮತ್ತೊಂದು ಶತಕ ಗಳಿಸಿದ್ದಾರೆ. ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆಗೈಯುತ್ತಿದ್ದಾರೆ.