Publish Date: Sat, 06 Dec 2025 (09:25 IST)
Updated Date: Sat, 06 Dec 2025 (09:32 IST)
ವಿಶಾಖಪಟ್ಟಣಂ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇಂದು ಏಕದಿನ ಸರಣಿಯ ಅಂತಿಮ ಮತ್ತು ನಿರ್ಣಾಯಕ ಪಂದ್ಯ ನಡೆಯಲಿದೆ. ಇಂದು ಸರಣಿ ಗೆಲ್ಲಬೇಕಾದರೆ ಟೀಂ ಇಂಡಿಯಾ ಈ ಬದಲಾವಣೆ ಮಾಡಲೇಬೇಕು.
ಕಳೆದ ಎರಡೂ ಪಂದ್ಯಗಳಲ್ಲಿ ಟೀಂ ಇಂಡಿಯಾದ ಮೂವರು ಬ್ಯಾಟಿಗರು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅದು ಬಿಟ್ಟರೆ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಇತರೆ ಆಟಗಾರರ ಸಾಧನೆ ಹೇಳಿಕೊಳ್ಳುವ ಮಟ್ಟಿಗಿಲ್ಲ. ಅದರಲ್ಲೂ ಬೌಲಿಂಗ್ ಮತ್ತು ಫೀಲ್ಡಿಂಗ್ ಸಾಕಷ್ಟು ಸುಧಾರಣೆ ಕಾಣಬೇಕಿದೆ.
ಭಾರತ ತಂಡದಲ್ಲಿ ಈ ಪಂದ್ಯಕ್ಕೆ ಎರಡು ಮುಖ್ಯ ವಿಚಾರಗಳಲ್ಲಿ ಬದಲಾವಣೆಯಾಗಬೇಕಿದೆ. ಒಂದು ಡೆತ್ ಓವರ್ ಬೌಲಿಂಗ್ ಸುಧಾರಣೆಯಾಗಬೇಕು. ಇನ್ನೊಂದು ಕೊನೆಯ ಓವರ್ ಗಳಲ್ಲಿ ಬ್ಯಾಟರ್ ಗಳು ರನ್ ಗಳಿಸಬೇಕು. ಆದರೆ ಫಿನಿಶರ್ ಗಳ ಕೊರತೆ ಭಾರತ ತಂಡಕ್ಕೆ ಎದ್ದು ಕಾಣುತ್ತಿದೆ.
ಕಳೆದ ಪಂದ್ಯದಲ್ಲಿ 350 ಪ್ಲಸ್ ರನ್ ಗಳಿಸಿಯೂ ಭಾರತ ಸೋತಿದ್ದು ಡೆತ್ ಓವರ್ ಬೌಲಿಂಗ್ ನಿಂದ. ಹೀಗಾಗಿ ಈ ಪಂದ್ಯಕ್ಕೆ ಭಾರತ ತಂಡದಲ್ಲಿ ಬೌಲರ್ ಗಳು ಸುಧಾರಿತ ಪ್ರದರ್ಶನ ನೀಡಬೇಕಿದೆ. ಜಡೇಜಾ, ಪ್ರಸಿದ್ಧ ಪರಿಣಾಮಕಾರಿಯಾಗುತ್ತಿಲ್ಲ. ಆದರೆ ಅವರ ಬದಲಿಗೆ ಆಡಿಸುವಂತಹ ಆಟಗಾರರೂ ತಂಡದಲ್ಲಿಲ್ಲ. ಹೀಗಾಗಿ ಇದೇ ಬೌಲರ್ ಗಳನ್ನೇ ನೆಚ್ಚಿಕೊಂಡು ಇಂದಿನ ಪಂದ್ಯವನ್ನೂ ಆಡಬೇಕಿದೆ. ಹಾಗಿದ್ದರೂ ನಿತೀಶ್ ಕುಮಾರ್ ರೆಡ್ಡಿಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ. ಹೀಗಾದಲ್ಲಿ ವಾಷಿಂಗ್ಟನ್ ಸುಂದರ್ ಅಥವಾ ಪ್ರಸಿದ್ಧ ಕೃಷ್ಣಗೆ ಕೊಕ್ ನೀಡಬಹುದು. ಆದರೆ ಬ್ಯಾಟಿಂಗ್ ನಲ್ಲಿ ಯಾವುದೇ ಬದಲಾವಣೆ ಸಾಧ್ಯತೆಯಿಲ್ಲ. ಇಂದಿನ ಪಂದ್ಯ ವಿಶಾಖಪಟ್ಟಣಂನಲ್ಲಿ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.