ವಿಶಾಖಪಟ್ಟಣಂ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಮೊದಲ 10 ಓವರ್ ಗಳಲ್ಲಿ ಆಫ್ರಿಕಾ ರನ್ ಗಾಗಿ ಪರದಾಡುತ್ತಿತ್ತು. ಈ ವೇಳೆ ಆಫ್ರಿಕಾ ಸಂಕಷ್ಟವನ್ನು ಟೀಂ ಇಂಡಿಯಾ ಬೌಲರ್, ಕನ್ನಡಿಗ ಪ್ರಸಿದ್ಧ ಕೃಷ್ಣ ನಿವಾರಿಸಿದರು.
ದ್ವಿತೀಯ ಏಕದಿನ ಪಂದ್ಯದಲ್ಲಿ ಬೇಕಾ ಬಿಟ್ಟಿ ರನ್ ಕೊಟ್ಟು ಭಾರತದ ಸೋಲಿಗೆ ಪ್ರಮುಖ ಕಾರಣವಾಗಿದ್ದು ಪ್ರಸಿದ್ಧ ಕೃಷ್ಣ ಮೂರನೇ ಪಂದ್ಯದಲ್ಲೂ ಅವಕಾಶ ಪಡೆದಿದ್ದಾರೆ. ಇಂದು ಅಪರೂಪಕ್ಕೆ ಟಾಸ್ ಗೆದ್ದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದಿತ್ತು.
ಆದರೆ ಪ್ರಸಿದ್ಧ ಕೃಷ್ಣ ಬೌಲಿಂಗ್ ಗೆ ಬರುತ್ತಿದ್ದಂತೇ ಆಫ್ರಿಕಾ ಬ್ಯಾಟಿಂಗ್ ಗೇರ್ ಬದಲಾಯಿಸಿತು. ಎರಡನೇ ಓವರ್ ನಲ್ಲಿ ಎರಡು ಸಿಕ್ಸರ್, ಒಂದು ಬೌಂಡರಿ ಸಹಿತ ಬರೋಬ್ಬರಿ 18 ರನ್ ನೀಡಿದರು. ಅಷ್ಟು ಹೊತ್ತು ರನ್ ಗಾಗಿ ಪರದಾಡುತ್ತಿದ್ದ ಆಫ್ರಿಕಾ ಬ್ಯಾಟಿಗರು ಪ್ರಸಿದ್ಧ ಬರುತ್ತಿದ್ದಂತೇ ಮನಸೋ ಇಚ್ಛೆ ರನ್ ಗಳಿಸಿದರು.
ಈ ಕಾರಣಕ್ಕೆ ಅವರನ್ನು ಎರಡೇ ಓವರ್ ಗೆ ಬೌಲಿಂಗ್ ನಿಂದ ಹಿಂಪಡೆಯಲಾಯಿತು. ಕಳೆದ ಪಂದ್ಯದಲ್ಲೂ ಪ್ರಸಿದ್ಧ ಬೌಲಿಂಗ್ ಗೆ ಬೇಸತ್ತು ನಾಯಕ ಕೆಎಲ್ ರಾಹುಲ್ ಮೈದಾನದಲ್ಲೇ ಬೈದಿದ್ದರು. ಈ ಪಂದ್ಯದಲ್ಲೂ ಅವರ ಬೌಲಿಂಗ್ ನಲ್ಲಿ ಯಾವುದೇ ಸುಧಾರಣೆಯಿಲ್ಲ.