ಗುವಾಹಟಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಇಂದು ಕುಲದೀಪ್ ಯಾದವ್ ತಂಡ ಸಂಕಷ್ಟಕ್ಕೊಳಗಾಗಿದ್ದಾಗ 82 ಎಸೆತ ಎದುರಿಸಿ 14 ರನ್ ಗಳಿಸಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಆಫ್ರಿಕಾ ಮೊದಲ ಇನಿಂಗ್ಸ್ ನಲ್ಲಿ 489 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ ಮತ್ತೆ ಬ್ಯಾಟಿಂಗ್ ಕುಸಿತಕ್ಕೊಳಗಾಗಿದ್ದು ಫಾಲೋ ಆನ್ ಭೀತಿಯಲ್ಲಿತ್ತು. ಒಂದು ಹಂತದಲ್ಲಿ ತಂಡ 119 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಈ ವೇಳೆ ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ಜೋಡಿ ಜೊತೆಯಾಗಿದ್ದು ಟೆಸ್ಟ್ ಇನಿಂಗ್ಸ್ ಹೇಗೆ ಆಡಬೇಕೆಂದು ಬ್ಯಾಟಿಗರಿಗೆ ತೋರಿಸಿಕೊಟ್ಟಿದ್ದಾರೆ. ಇಂದು ಭೋಜನ ವಿರಾಮದ ವೇಳೆಗೆ ವಾಷಿಂಗ್ಟನ್ ಸುಂದರ್ 66 ಎಸೆತದಿಂದ 33 ರನ್ ಗಳಿಸಿದ್ದರೆ ಅವರಿಗೆ ಸಾಥ್ ನೀಡುತ್ತಿರುವ ಕುಲದೀಪ್ ಯಾದವ್ 82 ಎಸೆತ ಎದುರಿಸಿ 14 ರನ್ ಗಳಿಸಿದ್ದಾರೆ. ಡಿಫೆನ್ಸ್ ಹೊಡೆತಗಳ ಮೂಲಕ ತಾಳ್ಮೆಯ ಆಟ ಪ್ರದರ್ಶಿಸಿದ ಕುಲದೀಪ್ ಯಾದವ್ ಬ್ಯಾಟಿಗರೂ ನಾಚುವಂತೆ ಆಡಿದ್ದಾರೆ.